ಕೊಪ್ಪಳ: ಕಾರಟಗಿ ( Karatagi) ಪಟ್ಟಣದ ಹೊರವಲಯದಲ್ಲಿ ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು 42 ಬೈಕ್, 5.47 ಲಕ್ಷ ರೂ. ನಗದನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ನಾಗನಕಲ್ ಎಂಬ ಗ್ರಾಮದಲ್ಲಿನ ಕಲ್ಲಿನ ಕ್ವಾರಿಯಲ್ಲಿ ಅಕ್ರಮವಾಗಿ ಜೂಜುಕೋರರು ಜೂಜಾಡುತ್ತಿದ್ದರು. 8 ಜನರನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಅಲ್ಲದೇ 42 ಬೈಕ್, 11 ಮೊಬೈಲ್ ಹಾಗೂ ಇಸ್ಪೀಟ್ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 5.47 ಲಕ್ಷ ರೂ. ಹಣವನ್ನು ಪೊಲಿಸರು ಜಪ್ತಿ ಮಾಡಿದ್ದಾರೆ.
ವಶಕ್ಕೆ ಪಡೆದ ಜೂಜುಕೋರರಲ್ಲಿ ಹೊರ ಜಿಲ್ಲೆಯ ನಾಲ್ವರು, ಇಬ್ಬರು ಹೊರ ರಾಜ್ಯದವರಿದ್ದು, ಮತ್ತಿಬ್ಬರು ಸ್ಥಳೀಯರು ಎಂದು ಪೊಲೀಸರು ಗುರುತಿಸಿದ್ದಾರೆ. ನಿತ್ಯ ಲಕ್ಷಾಂತರ ರೂ. ಮೊತ್ತದ ನಗದು ಹಣವನ್ನು ಕಾನೂನು ಬಾಹಿರವಾಗಿ ಪಣಕ್ಕೆ ಇಟ್ಟು ಇಲ್ಲಿ ಜೂಜಾಟವಾಡುತ್ತಿದ್ದರು. ಖಚಿತ ಮಾಹಿತಿ ಮೆರೆಗೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಸ್ಪೀಟ್ ಜೂಜಾಟದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಇದ್ದರು. ಈ ಸಂದರ್ಭದಲ್ಲಿ ಕೆಲವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಸೈಬರ್ ಕ್ರೈಂ ವಿಭಾಗದ ಮಹಾಂತೇಶ ಸಜ್ಜನ್ ಹಾಗೂ ಜಿಲ್ಲಾ ಅಪರಾಧ ತನಿಖಾ ವಿಭಾಗದ ಇನ್ಸ್‌ಪೆಕ್ಟರ್ ಶಿವರಾಜ ಇಂಗಳಗಿ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂಬಂಧ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.