ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳನ್ನ ನಿಯಂತ್ರಿಸುವ ನಿಟ್ಟಿನಲ್ಲಿ ಮದ್ಯದಂಗಡಿಗಳ ಕಡಿವಾಣಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿ ಒಂದು ತಿಂಗಳು ಕಳೆದಿದೆ. ಆದರೆ ಈ ಮಹತ್ವದ ಆದೇಶಕ್ಕೂ ಕ್ಯಾರೆ ಎನ್ನದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಾಬಾ ಹಾಗೂ ಹೋಟೆಲ್‍ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಡಾಬಾ ಹಾಗೂ ಹೋಟೆಲ್ ಮಾಲೀಕರು ರಾಜಾರೋಷವಾಗಿ ಆಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದರು. ಹೀಗಾಗಿ ಕಳೆದ ರಾತ್ರಿ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಸಿಂಗಂ ಎಂದೇ ಹೆಸರಾಗಿರುವ ಪಿಎಸ್‍ಐ ಮಂಜುನಾಥ್, ಡಾಬಾಗಳ ಮೇಲೆ ದಿಢೀರ್ ದಾಳಿ ನಡೆಸಿ ಮದ್ಯದ ಬಾಟಲಿಗಳನ್ನ ಪೀಸ್ ಪೀಸ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಮನೋಜ್, ತಿರುಮಲ, ವೈಟಿ, ಫಿಶ್‍ಲ್ಯಾಂಡ್, ನರ್ತಕಿ ಹಾಗೂ ಇನ್ನಿತರ ಡಾಬಾಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಎಣ್ಣೆ ಬಾಟಲಿಗಳು ಸೇರಿದಂತೆ ಆರು ಜನರನ್ನ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಮದ್ಯದ ಗುಂಗಿನಲ್ಲಿದ್ದ ನೂರಾರು ಎಣ್ಣೆ ಪ್ರೀಯರು ಸಂದಿಗೊಂದಿ ಎನ್ನದೆ ದಿಕ್ಕಾಪಾಲಾಗಿ ಓಡಿಹೋದ ಘಟನೆಯೂ ನಡೆದಿದೆ.
ಇಡೀ ರಾತ್ರಿ ಪಿಎಸ್‍ಐ ಮಂಜುನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಎಣ್ಣೆ ಪ್ರಿಯರಿಗೆ ಹಾಗೂ ಡಾಬಾ ಮಾಲೀಕರಿಗೆ ನಿದ್ದೆ ಕೆಡಿಸಿ ಖಡಕ್ ಎಚ್ಚರಿಕೆಯನ್ನ ನೀಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ನೆಲಮಂಗಲ ಪಟ್ಟಣದ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿನಿತ್ಯ ಅಪಘಾತ ಪ್ರಕರಣಗಳು ಸಂಭವಿಸುತ್ತಿದ್ದು, ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನ ಗಾಳಿಗೆ ತೂರಿದ್ದ ಮಾಲೀಕರಿಗೆ ಈ ದಾಳಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಎಲ್ಲ ಪೊಲೀಸರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ದಂಧೆಗಳಿಗೆ ಕಡಿವಾಣ ಹಾಕಿದ್ರೆ ಕುಡಿತದಿಂದ ಸಂಭವಿಸುವ ಅಪಘಾತದಿಂದ ಸಾವಿರಾರು ಜೀವಗಳ ಉಳಿಯುವಿಕೆಗೆ ನಾಂದಿಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.