ರಾಮನಗರ: ಯುಗಾದಿ ಹಬ್ಬದ ಸಂದರ್ಭದಲ್ಲಿ ಹಳ್ಳಿ ಜನರು ಇಸ್ಪೀಟು ಆಡುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿದೆ. ಅವರಿಗೆ ಪೊಲೀಸರು ತೊಂದರೆ ಕೊಡದಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಳ್ಳಿಗಾಡಿನಲ್ಲಿ ಯುಗಾದಿ ಹಬ್ಬದ ವೇಳೆ ಎಲ್ಲರೂ ಮನೆಯಲ್ಲೇ ಇರುತ್ತಾರೆ. ರೈತರು ಹಬ್ಬದ ಮಾರನೇ ದಿನದಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಿರುವುದರಿಂದ ಆ ಎರಡು ದಿನ ಇಸ್ಪೀಟು ಆಡಿ ಸಂತಸ ಪಡುತ್ತಾರೆ. ಇದು ಸಂಪ್ರದಾಯವಾದ್ದರಿಂದ ಪೊಲೀಸರು ಜನರಿಗೆ ತೊಂದರೆ ಕೊಡದಂತೆ ಸರ್ಕಾರ ನಿರ್ದೇಶನ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು ವಿಚಾರವಾಗಿ ʼಸುಳ್ಳಿನಯಾತ್ರೆʼ ಹೊರಟವರ ಜಾತಕ ಬೆತ್ತಲಾಗ್ತಿದೆ: ಹೆಚ್‌ಡಿಕೆ
ಇದೇ ವೇಳೆ ಹಲಾಲ್ ಕಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹಿಂದೂ, ಮುಸ್ಲಿಂ ಇನ್ನಾವುದೇ ಸಮಾಜವು ಪರಸ್ಪರ ಬಾಂಧವ್ಯದಿಂದ ಇರುವ ವಾತಾವರಣ ಇತ್ತು. ಕರಾವಳಿ ಭಾಗದಲ್ಲಿ ಮಾತ್ರ ಕೆಲವರು ಅವರೇ ವಿವಾದ ಹುಟ್ಟುಹಾಕಿಕೊಂಡಿದ್ದರು. ಆದರೆ ಇಂದು ಪ್ರತಿದಿನ ಹಿಂದುತ್ವದ ಹೆಸರಿನಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಾ ಸಮಾಜದ ಶಾಂತಿ ಕದಡುವ ಕೆಲಸವಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣ’
ಹಬ್ಬದ ಹೊಸತೊಡಕು ಮಾಡುವ ಸಂದರ್ಭದಲ್ಲಿ ಮಾಂಸಾಹಾರ ಸೇವನೆ ಮಾಡುವವರು ಹಲಾಲ್ ಮಾಡಿದ್ದಾರೋ ಇಲ್ಲವೋ ಎಂದು ನೋಡುವುದಿಲ್ಲ. ಹಾಗೇ ತಂದು ಹಬ್ಬದ ಅಡುಗೆ ಮಾಡುತ್ತಾರೆ. ಇಲ್ಲಿಯವರೆಗೆ ಇಲ್ಲದ ಹಲಾಲ್ ಕಟ್ ವಿಚಾರ ಈಗ ಮಾತನಾಡಿದ್ದೇಕೆ? ಇದಕ್ಕಾಗಿಯೇ ಇವರು ಸದನದಲ್ಲಿ ಕುಳಿತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.