ಬೆಂಗಳೂರು: ಊರಿಗೆಲ್ಲಾ ಬುದ್ಧಿ ಹೇಳೋ ಪೊಲೀಸರೇ ಕೈ-ಕೈ ಮಿಲಾಯಿಸಿಕೊಂಡು ಠಾಣೆಯಲ್ಲಿ ಕಚ್ಚಾಡಿಕೊಂಡ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಜೂಜು ಅಡ್ಡೆ ಮೇಲೆ ನಡೆದ ದಾಳಿ ಸಂಬಂಧಪಟ್ಟಂತೆ ಮಹದೇವಪುರ ಠಾಣೆಯ ಎಎಸ್‍ಐ ಅಮೃತೇಶ್, ಹೆಡ್ ಕಾನ್ಸ್ ಟೆಬಲ್ ಜಯಕಿರಣ್ ಮತ್ತು ಸಬ್ ಇನ್ಸ್ ಪೆಕ್ಟರ್ ಅಶ್ವಥ್ ನಡುವೆ ಗಲಾಟೆ ನಡೆದಿದೆ.
Advertisement
ಏನಿದು ಘಟನೆ?
ಶನಿವಾರ ಸಂಜೆ 6 ಗಂಟೆ ವೇಳೆಗೆ ಇಸ್ಪಿಟ್ ಅಡ್ಡೆ ಮೇಲೆ ದಾಳಿ ನಡೆಸಿ ಪೊಲೀಸರು ಈ ವೇಳೆ 10 ಜನರನ್ನು ಬಂಧಿಸಿ, 42 ಸಾವಿರ ರೂ. ಹಣವನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತಂದ ಈ ಇಬ್ಬರು ಪೊಲೀಸರು 8 ಗಂಟೆ ವೇಳೆಗೆ ಅವರನ್ನು ಬಿಟ್ಟು ಕಳುಹಿಸಿದ್ದರು. ಯಾವುದೇ ಕಾನೂನು ಪಾಲನೆ ಮಾಡದೇ ಆರೋಪಿಗಳನ್ನು ಬಿಟ್ಟಿದ್ದು, ಯಾಕೆ ಎಂದು ಸಬ್ ಇನ್ಸ್ ಪೆಕ್ಟರ್ ಅಶ್ವಥ್ ಇಬ್ಬರನ್ನು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಅಶ್ವಥ್ ಪ್ರಶ್ನೆಗೆ ಅಮೃತೇಶ್ ಮತ್ತು ಜಯಕಿರಣ್ ಕೆಂಡಮಂಡಲವಾಗಿ ನಾವು ಬಿಟ್ಟಿದ್ದೇವೆ. ಅದನ್ನು ಪ್ರಶ್ನಿಸಲು ನೀವು ಯಾರು? ನಿನ್ನಂಥ ಎಸ್‍ಐಗಳನ್ನ ನೂರಾರು ಜನ ನೋಡಿದ್ದೇನೆ ಎಂದು ಹೇಳಿದ್ದಾರೆ. ಈ ವೇಳೆ ಅಶ್ವಥ್ ಕೇಸ್ ದಾಖಲಿಸದೇ ಬಿಡಬಾರದು ಎಂಬ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿ ತರಾಟಗೆ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಈ ವೇಳೆ ಮೂವರ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಏಕವಚನದಲ್ಲಿ ಬೈದಾಡಿಕೊಂಡು ಠಾಣೆಯ ಸಿಬ್ಬಂದಿ ಸಮ್ಮುಖದಲ್ಲೇ ಕೈ-ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ. ನಂತರ ಸ್ಟೇಷನ್ ಡೈರಿಯಲ್ಲಿ ಎಂಟ್ರಿ ಮಾಡಿ ಗಲಾಟೆ ಬಗ್ಗೆ ಡಿಸಿಪಿಗೆ ಎಸ್‍ಐ ಅಶ್ವಥ್ ಮಾಹಿತಿ ನೀಡಿದ್ದಾರೆ.
Advertisement
ಈ ವಿಚಾರದ ಬಗ್ಗೆ ಡಿಸಿಪಿ ಅಬ್ದುಲ್ ಅಹ್ಮದ್ ಪ್ರತಿಕ್ರಿಯಿಸಿ, ಪೊಲೀಸರು ಠಾಣೆಯಲ್ಲೇ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಸ್ಟೇಷನ್ ಡೈರಿಯಲ್ಲಿ ಎಂಟ್ರಿ ಮಾಡಿ ಗಲಾಟೆ ಬಗ್ಗೆ ಎಸ್‍ಐ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಎಎಸ್‍ಐ ಮತ್ತು ಹೆಡ್ ಕಾನ್ಸ್ ಟೆಬಲ್ ಕರ್ತವ್ಯ ಲೋಪ ಕಂಡು ಬಂದಿದ್ದು ಈಗ ಇವರಿಬ್ಬರನ್ನು ಅಮಾನತು ಮಾಡಲಾಗಿದ್ದು ಮಾರತ್ತಹಳ್ಳಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಅದೇಶ ನೀಡಲಾಗಿದೆ ಎಂದು ತಿಳಿಸಿದರು.