ರಾಯಚೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್‍ನ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಭೀತಿಗೆ ನಗರದಿಂದ ಜನ ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಈ ಬೆನ್ನಲ್ಲೇ ಹಳ್ಳಿಗಳಲ್ಲಿಯೂ ಈ ಬಗ್ಗೆ ಯುವಕರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಡಂಗೂರ ಬಾರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಡಿ.ರಾಂಪೂರ್ ಗ್ರಾಮದಲ್ಲಿ ಯುವಕರ ತಂಡ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಂಗನವಾಡಿ ಸಹಾಯಕಿಯರು ಸೇರಿ ಮನೆ ಮನೆಗೆ ಹೋಗಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಒಂದೆಡೆ ಮನೆಯಿಂದ ಹೊರ ಬರಬೇಡಿ, ತೀರಾ ಅಗತ್ಯ ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ, ಎಲ್ಲರೂ ಮಾಸ್ಕ್ ಗಳನ್ನ ಧರಿಸಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.
Advertisement
Advertisement
ಇನ್ನೊಂದೆಡೆ 21 ದಿನಗಳ ತನಕ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ಘೋಷಿಸಿದರೂ ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ಹೋಗುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಜನ ಒಟ್ಟೊಟ್ಟಿಗೆ ಬಸ್ ನಿಲ್ದಾಣ, ಹಳ್ಳಿ ಕಟ್ಟೆಗಳಲ್ಲಿ ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಯಾಪಲದಿನ್ನಿ ಪೊಲೀಸರಿಗೆ ಕೊರೊನಾ ವೈರಸ್ ಬಗ್ಗೆ ಗ್ರಾಮಗಳಿಗೆ ಬಂದು ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರೂ ಪೊಲೀಸರು ಮಾತ್ರ ಕಾಟಚಾರಕ್ಕೆ ಹಳ್ಳಿಗಳಿಗೆ ಬಂದು ಹೋಗ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
ಹೀಗಾಗಿ ಸ್ವತಃ ಊರಿನ ಯುವಕರು ಹಾಗೂ ಪಂಚಾಯ್ತಿ ಸದಸ್ಯರು ಸೇರಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಅತ್ಯವಶ್ಯಕವಾಗಿರುವ ಅಂಗಡಿಗಳನ್ನು ಮಾತ್ರ ತೆರೆಯಬೇಕು. ಅಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಲೈನ್ ಬಾಕ್ಸ್ ಗಳಲ್ಲಿ ನಿಂತು ವ್ಯವಹರಿಸಬೇಕು ಅಂತ ಜಾಗೃತಿ ಮೂಡಿಸಲಾಗುತ್ತಿದೆ.
Advertisement
ಲಾಕ್‍ಡೌನ್ ನಡುವೆಯೂ ಮೀನು ಹಿಡಿಯುತ್ತಿರುವ ಜನ
ಲಾಕ್‍ಡೌನ್ ಘೋಷಣೆ ಬಳಿಕ ಜನರು ಮನೆಯಲ್ಲಿಯೇ ಇರಬೇಕು ಎಂದು ತಿಳಿಸಿ ಹೇಳಿದರೂ ಡಿ.ರಾಂಪೂರ್, ಆತ್ಕೂರು, ವಡ್ಡೆಪಲ್ಲಿ, ಯಾಪಲದಿನ್ನಿ, ಕೊರ್ತಕುಂದ ಗ್ರಾಮಗಳಲ್ಲಿ ಮೀನುಗಾರರು ಮೀನು ಹಿಡಿಯಲು ನದಿಗೆ ಇಳಿಯುತ್ತಿದ್ದಾರೆ. ಇತ್ತ ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಂಚ್ಚಿಕೊಂಡು ಕುಳಿತಿದ್ದಾರೆ. ಮದ್ಯ ಮಾರಾಟಗಾರರ ಜೊತೆ ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮಗಳಿಗೆ ಪೊಲೀಸರು ಭೇಟಿ ನೀಡ್ತಿಲ್ಲ. ಸಂಜೆಯಿಂದ ರಾತ್ರಿ ತನಕ ಮದ್ಯ ಖರೀದಿಗೆ ಜನ ಗುಂಪು ಸೇರ್ತಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.