ಅನುಮತಿ ಇಲ್ಲಾಂದ್ರೂ ಗಣಪನ ಕೂರಿಸಿದ್ರು – ಪಟಾಕಿ ಕಿಡಿಗೆ ಎಎಸ್‍ಐ ಕಣ್ಣೇ ಹೋಯ್ತು

Public TV
1 Min Read
ASI INJURED

ಬೆಂಗಳೂರು: ನಗರದಲ್ಲಿ ಗಣೇಶನ ವಿಸರ್ಜನೆ ವೇಳೆ ಪಟಾಕಿ ಹೊಡೆದಿದ್ದರಿಂದ ಅದರ ಕಿಡಿ ಎಎಸ್‍ಐ ಕಣ್ಣಿಗೆ ಬಿದ್ದು, ಗಂಭೀರವಾಗಿ ಗಾಯವಾಗಿರುವ ಘಟನೆ ನಡೆದಿದೆ.

ಈ ಘಟನೆ ಭಾನುವಾರ ಗಣೇಶನ ವಿಸರ್ಜನೆ ವೇಳೆ ನಡೆದಿದ್ದು, ತಡವಾಗಿ ಬೆಳಕಿಗೆ ಬೆಂದಿದೆ. ಆರ್.ಟಿ ನಗರದದಲ್ಲಿ ಗಣೇಶನನ್ನು ಕೂರಿಸಲು ಪೋಲೀಸರ ಅನುಮತಿಯನ್ನು ಕೇಳಿದ್ದಾರೆ. ಆದರೆ ಪೊಲೀಸರು ಇದಕ್ಕೆ ಒಪ್ಪದೆ ನಿರಾಕರಿಸಿದ್ದರು. ಇದನ್ನೂ ಓದಿ: ಗಣಪತಿ ವಿಸರ್ಜನೆ ವೇಳೆ ಎಸ್‍ಐರನ್ನು ಹೊತ್ತು ಕುಣಿದ ವಿಡಿಯೋ ವೈರಲ್

ASI

ಪೊಲೀಸರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೊಡದಿದ್ದರೂ ಆರ್.ಟಿ.ನಗರ ಪೋಸ್ಟ್ ಆಫೀಸ್ ಮುಂಭಾಗದ ರಸ್ತೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿತ್ತು. ಭಾನುವಾರ ಸಂಜೆ ಗಣೇಶನ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪಟಾಕಿ ಮತ್ತು ಡಿಜೆಯನ್ನು ಕೂಡ ಏರ್ಪಡಿಸಲಾಗಿತ್ತು.

ಪೊಲೀಸರು ಬಂದು ಪಟಾಕಿ ಹೊಡೆಯದೆ ಗಣೇಶ ವಿಸರ್ಜನೆ ಮಾಡಿ ಎಂದು ಸೂಚಿಸಿದ್ದಾರೆ. ಆದ್ರೆ ಅವರ ಮಾತನ್ನು ಲೆಕ್ಕಿಸದೆ ಹುಡುಗರ ಗುಂಪು ಪಟಾಕಿಯನ್ನು ಸಿಡಿಸಿದ್ದಾರೆ. ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ಎಎಸ್‍ಐ ನಾರಾಯಣಪ್ಪ ಅವರ ಬಲಗಣ್ಣಿಗೆ ಪಟಾಕಿ ಕಿಡಿ ತಗುಲಿ ಗಂಭೀರವಾಗಿ ಗಾಯವಾಗಿದೆ. ನಂತರ ಸಹ ಪೊಲೀಸರು ತಕ್ಷಣವೇ ನಾರಾಯಣಪ್ಪನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ASI

ಕಣ್ಣಿಗೆ ಬಲವಾಗಿ ಗಾಯವಾಗಿದ್ದರಿಂದ ಕಣ್ಣನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಬಳಿಕ ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಸಹ ಪೊಲೀಸರು ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಇದೀಗ ನಾರಾಯಣಪ್ಪ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರು 18 ದಿನಗಳ ಬಳಿಕ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ ಅಂತ ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *