– ನಾಲ್ಕು ತಿಂಗಳಿಂದ ಯುವತಿಗೆ ಕಾಟ ಕೊಡುತ್ತಿದ್ದ ಆರೋಪಿ ಪಾಪಿ ಹಳೆಯ ಸ್ನೇಹಿತ
– ಯುವತಿ ಕಾಣೆಯಾದ ದಿನ ನಿಮ್ಮ ಮಗಳನ್ನ ತಂದೊಪ್ಪಿಸ್ತೀನಿ ಎಂದಿದ್ದ
– ಹುಟ್ಟು ಹಬ್ಬದ ಹೊಸ್ತಿಲಲ್ಲೇ ಹೆಣವಾದ ಯುವತಿ
– ಯುವತಿ ಸಾವಿಗೆ ಮಿಡಿಯುತ್ತಿರುವ ರಾಜ್ಯದ ಜನತೆ
ವಿಜಯ್ ಜಾಗಟಗಲ್
ರಾಯಚೂರು: ನಗರದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣ ದಿನಕ್ಕೊಂದು ಹೊಸ ಟ್ಟಿಸ್ಟ್ ಗಳನ್ನ ಪಡೆಯುತ್ತಿದೆ. ಮೃತ ಯುವತಿ ಮಧು ಪತ್ತಾರ್ ಶವ ಪತ್ತೆಯಾದ ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ ಆಧಾರದ ಮೇಲೆ ನೇತಾಜಿ ನಗರ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸಾವಿನ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕ ವಲಯದಲ್ಲಿ ಉಂಟಾದ ಅನುಮಾನ, ಹೋರಾಟ ಹಾಗೂ ಪೋಷಕರು ನೀಡಿದ ದೂರಿನ ಮೇರೆಗೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುದರ್ಶನ್ ಯಾದವ್ ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement
ಡೆತ್ ನೋಟ್ ನಲ್ಲೇನಿತ್ತು, ಅಸಲಿ ಸತ್ಯ ಏನು?
ಯುವತಿ ಶವದ ಬಳಿ ಸಿಕ್ಕ ಡೆತ್ ನೋಟ್ ನಲ್ಲಿ ಓದಲು ಆಗುತ್ತಿಲ್ಲ ಕಡಿಮೆ ಅಂಕ, ಬರುತ್ತಿದೆ ಫೇಲ್ ಆಗುತ್ತಿದ್ದೇನೆ ಅದಕ್ಕೆ ಈ ನಿರ್ಧಾರ ಮಾಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಯಾರೂ ಹೊಣೆಯಲ್ಲ ಅಂತ ಬರೆಯಲಾಗಿದೆ. ಆದ್ರೆ ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಮಧು ಪತ್ತಾರ್ ಸಿವಿಲ್ ಎಂಜಿನಿಯರಿಂಗ್ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣಳಾಗಿದ್ದಾಳೆ. ಐದನೇ ಸೆಮಿಸ್ಟರ್ ನಲ್ಲೀ ಫೇಲಾಗಿದ್ದ ಎರಡು ವಿಷಯಗಳು ಮರುಮೌಲ್ಯಮಾಪನದಲ್ಲಿ ಪಾಸ್ ಆಗಿದ್ದಾಳೆ. ಅಲ್ಲದೇ ಕಾಲೇಜಿನಲ್ಲಿ ತುಂಬಾ ಚೂಟಿಯಾಗಿದ್ದ ಮಧು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ಹೊಂದಿರಲಿಲ್ಲ ಅಂತ ಅವಳ ಸಹಪಾಠಿಗಳು ಹೇಳಿದ್ದಾರೆ. ಹೀಗಾಗಿ ಕೇವಲ ಡೆತ್ ನೋಟ್ ಆಧಾರದ ಮೇಲೆ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಇರುಸುಮುರುಸು ಉಂಟಾಗಿದೆ.
Advertisement
Advertisement
ನಾಲ್ಕು ತಿಂಗಳಿಂದ ಕಾಟ:
ಪಿಯುಸಿ ಸಹಪಾಠಿಯಾದ ಸುದರ್ಶನ್ ಯಾದವ್ ಜೊತೆ ಮಧು ಪತ್ತಾರ್ ನಾಲ್ಕು ವರ್ಷದಿಂದ ಸ್ನೇಹದಲ್ಲಿದ್ದಾಳೆ. ಆದರೆ ಇತ್ತೀಚೆಗೆ ಮಧು ಆರೋಪಿಯಿಂದ ದೂರವಾಗಿದ್ದಳು. ಇದರಿಂದ ಸುದರ್ಶನ್ ಯುವತಿಗೆ ಕಿರುಕುಳ ನೀಡಲು ಶುರುಮಾಡಿದ್ದನಂತೆ. ನವೋದಯ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದಲ್ಲಿ ಮಗಳಿಗೆ ಹಿಂಸೆ ನೀಡುವುದ್ದನ್ನು ಮಧು ಪತ್ತಾರ್ ತಂದೆ ನಾಗರಾಜ್ ಪತ್ತಾರ್ ಕಣ್ಣಾರೆ ನೋಡಿದ್ದಾರೆ. ಅಂದಿನಿಂದ ಮಗಳಿಗೆ ತಂದೆ ಕಾವಲಾಗಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೆ ಏಪ್ರಿಲ್ 13 ರಂದು ಮನೆಯಿಂದ ಕಾಲೇಜಿಗೆ ಹೋದ ಮಗಳು ಮರಳಿ ಬರಲಿಲ್ಲ. ಕಾಣೆಯಾದ ದಿನವೇ ಸುದರ್ಶನ್ ಹುಡುಕಿದ ಮಧು ತಂದೆ ನಾಗರಾಜ್ ಮಗಳ ಬಗ್ಗೆ ವಿಚಾರಿಸಿದ್ದಾರೆ. ಮಧುಳನ್ನ ಕರೆದುಕೊಂಡು ಬರುತ್ತೇನೆ ಅಂತ ಹೇಳಿ ಸುದರ್ಶನ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಏಪ್ರಿಲ್ 17 ರಂದು ಮಧು ಹುಟ್ಟುಹಬ್ಬದ ದಿನದಂದು ಕೇಕ್ ಕತ್ತರಿಸಿ ಕಣ್ಣೀರಿಟ್ಟಿದ್ದಾರೆ. ನಮ್ಮ ಮಗಳು ಸತ್ತಿಲ್ಲ, ಮನೆಗೆ ವಾಪಸ್ ಬರುತ್ತಾಳೆ ಎನ್ನುವ ನಂಬಿಕೆಯಲ್ಲಿದ್ದೇವೆ. ಆ ಪಾಪಿಗೆ ಉಗ್ರ ಶಿಕ್ಷೆಯಾಗಬೇಕು ಅಂತ ಮಧು ತಾಯಿ ರೇಣುಕಾದೇವಿ ಪಬ್ಲಿಕ್ ಟಿವಿ ಮುಂದೆ ಅಳಲು ತೋಡಿಕೊಂಡಿದ್ದಾರೆ.
Advertisement
ಕಂಬನಿ ಮಿಡಿಯುತ್ತಿದೆ ಇಡೀ ರಾಜ್ಯ
ಮಧು ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ಇಡೀ ರಾಜ್ಯವೇ ಎದ್ದು ಕುಳಿತಿದೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ರಾಯಚೂರಿಗೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮಧು ಪೋಷಕರನ್ನ ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇನ್ನೂ ಸ್ವತಃ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಘಟನೆಗೆ ಸಂತಾಪ ಸೂಚಿಸಿದ್ದಾರೆ. ರಾಯಚೂರು ಎಸ್ ಪಿ ಗೆ ಮಾತನಾಡಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಅಂತ ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಸೇರಿದಂತೆ ಸಿನೆಮಾ ನಟ ನಟಿಯರು ಸಹ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದು ಮಧು ಸಾವಿಗೆ ನ್ಯಾಯ ಸಿಗಬೇಕು ಅಂತ ಒತ್ತಾಯಿಸಿದ್ದಾರೆ.
ತನಿಖೆ ಎಲ್ಲಿಯವರೆಗೆ ಬಂದಿದೆ?
ಮೃತ ಮಧು ತಾಯಿ ರೇಣುಕಾದೇವಿ ದೂರಿನ ಮೇರೆಗೆ ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸುದರ್ಶನ ಯಾದವ್ ನನ್ನ ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಯುವತಿ ಶವ ಪತ್ತೆಯಾದ ದಿನ ಏಪ್ರಿಲ್ 16 ರಂದೇ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೇ ಆರೋಪಿಯಿಂದ ಯಾವ ಮಾಹಿತಿಯನ್ನ ಕಲೆಹಾಕಿದ್ದಾರೆ ಅನ್ನೋದು ಬಯಲಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಆರೋಪಿ ವೈದ್ಯಕೀಯ ಪರೀಕ್ಷೆ ವರದಿಗಳ ಆಧಾರದ ಮೇಲೆ ಪ್ರಕರಣ ನಿಂತಿದೆ.
ರಾಯಚೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು, ಸಾರ್ವಜನಿಕರು ಹೋರಾಟ ಮುಂದುವರಿಸಿದ್ದಾರೆ. ನಗರದ ಅಂಬೇಡ್ಕರ್ ವೃತ್ತ, ವೀರ ಸಾವರ್ಕರ್ ವೃತ್ತದಲ್ಲಿ ಮೇಣದ ಬತ್ತಿ ಹಿಡಿದು ತಪ್ಪಿತ್ತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಅಂತ ಆಗ್ರಹಿಸಿ ಹೋರಾಟ ಮಾಡುತ್ತಲೇ ಇದ್ದಾರೆ. ಅಲ್ಲದೆ ವಿದ್ಯಾರ್ಥಿನಿ ಸಂಘಟನೆಗಳು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಒಟ್ಟಾಗಿ ಎಪ್ರಿಲ್ 25 ರಂದು ರಾಯಚೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.