ಹಾವೇರಿ: ಪೊಲೀಸರ ಬಗ್ಗೆ ಸಮಾಜದಲ್ಲಿ ಕೆಲವೊಂದು ಕೆಟ್ಟ ಅಭಿಪ್ರಾಯಗಳಿವೆ. ಆದರೆ ಪೊಲೀಸರಲ್ಲೂ ಮಾನವೀಯತೆ ಇದೆ. ಅವರು ಜನರ ಸಂಕಷ್ಟಕ್ಕೆ ಮಿಡಿಯುತ್ತಾರೆ ಎಂಬುದನ್ನು ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಠಾಣೆಯ ಪೊಲೀಸರು ತೋರಿಸಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿನ ಥಲಸೇಮಿಯಾ ಮಕ್ಕಳಿಗಾಗಿ ರಕ್ತದಾನ ಮಾಡುವ ಮೂಲಕ ಪೊಲೀಸರು ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.
ಹಾವೇರಿಯೊಂದರಲ್ಲಿ ಥಲಸೇಮಿಯಾ ಕಾಯಿಲೆಯಿಂದ 103 ಮಕ್ಕಳು ಬಳಲುತ್ತಿದ್ದಾರೆ. ಈ ಮಕ್ಕಳಿಗೆ ಪ್ರತಿ ತಿಂಗಳು ರಕ್ತ ಹಾಕಿಸಲೇಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ರಕ್ತ ಹಾಕಿಸದಿದ್ದರೆ ಅಂತಹ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮಕ್ಕಳ ಪರಿಸ್ಥಿತಿ ಕಂಡು ಹೆತ್ತವರಂತೂ ಅಕ್ಷರಶಃ ಕಣ್ಣೀರಿಡುತ್ತಿದ್ದಾರೆ. ಹೀಗಾಗಿ ಥಲಸೇಮಿಯಾ ಮಕ್ಕಳಿಗೆ ಎದುರಾಗುತ್ತಿರುವ ರಕ್ತದ ಕೊರತೆ ನೀಗಿಸಬೇಕು ಎಂಬ ಉದ್ದೇಶದಿಂದ ಆಡೂರು ಪೊಲೀಸ್ ಠಾಣೆಯ ಪೊಲೀಸರು ಜೀವದಾನ ಹಬ್ಬ ಎಂಬ ಹೆಸರಿನ ರಕ್ತದಾನ ಶಿಬರ ನಡೆಸಿದರು. ಇದನ್ನೂ ಓದಿ:ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ: ಎ.ನಾರಾಯಣಸ್ವಾಮಿ
ಪೊಲೀಸರ ಅಭಿಮಾನಿ ಆಗಿರುವ ಬೆಂಗಳೂರು ಮೂಲದ ಆಸ್ಟ್ರೇಲಿಯಾದಲ್ಲಿ ಶಸ್ತ್ರಚಿಕಿತ್ಸಾ ತಂತ್ರಜ್ಞರಾಗಿರುವ ಶ್ರೀಮತಿ ಸುರೇಖಾ ರಾವ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಪೈಕಿ ಕೆಲವೇ ಕೆಲವರನ್ನು ಹೊರತುಪಡಿಸಿ ಹತ್ತೊಂಬತ್ತು ಜನರು ರಕ್ತದಾನ ಮಾಡಿದರು.
ಪೊಲೀಸರ ಜೊತೆಗೆ ಸದಾ ಒಡನಾಟ ಹೊಂದಿರುವ ಗ್ರಾಮದ ಕೆಲವರು ಸಹ ಪೊಲೀಸರ ಕಾರ್ಯವನ್ನು ಮೆಚ್ಚಿ ಹದಿನೈದು ಜನರು ರಕ್ತದಾನ ಮಾಡಿದರು. ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮದ ಜನರು ಸೇರಿ ಒಟ್ಟು 34 ಜನರು ಶಿಬಿರದಲ್ಲಿ ರಕ್ತದಾನಿಗಳಾದರು. ಇದನ್ನೂ ಓದಿ:ಮಗನ ಪ್ರಾಣ ಉಳಿಸಿಕೊಳ್ಳಲು ವೈದ್ಯರ ಕಾಲು ಹಿಡಿದ ತಾಯಿ
ಐವತ್ತು ಮೂರು ಬಾರಿ ರಕ್ತದಾನ ಮಾಡಿರುವ ಕಿರಣ ಗಡ ಎಂಬುವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ, ಡಿವೈಎಸ್ಪಿ ಕಲ್ಲೇಶಪ್ಪ, ಸಿಪಿಐ ಶಿವಶಂಕರ್ ಗಣಾಚಾರಿ ಮತ್ತು ಪಿಎಸ್‍ಐ ನೀಲಪ್ಪ ನರಲಾರ ಶಿಬಿರದಲ್ಲಿ ಭಾಗವಹಿಸಿ ಪೊಲೀಸ್ ಸಿಬ್ಬಂದಿಗಳ ಮನಮಿಡಿಯುವ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಇದನ್ನೂ ಓದಿ:ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ
ಈ ವೇಳೆ ಮಾತನಾಡಿದ ವಿಜಯಕುಮಾರ್ ಸಂತೋಷ, ಆಡೂರು ಠಾಣೆ ಪೊಲೀಸರ ಕಾರ್ಯ ಮೆಚ್ಚುವಂತಹದು. ಪೊಲೀಸ್ ಸಿಬ್ಬಂದಿ ಒತ್ತಡ ನಿವಾರಣೆಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲೂ ರಕ್ತದಾನ ಶಿಬಿರ ನಡೆಯುವಂತೆ ಮಾಡುತ್ತೇವೆ ಎಂದರು.