– ಪತ್ನಿಗೆ ಅನಾರೋಗ್ಯದ ಕಾರಣ ರಜೆಯಲ್ಲಿದ್ರು
– ಮೂರು ದಿನದಲ್ಲಿ 450 ಕಿ.ಮೀ ನಡೆದ್ರು
ಭೋಪಾಲ್: ಮಾರಣಾಂತಿಕ ಕೊರೊನಾ ವೈರಸ್‍ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಪೊಲೀಸರು ಮಾತ್ರ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಕಾನ್‍ಸ್ಟೇಬಲ್ ಬರೋಬ್ಬರಿ 450 ಕಿಲೋ ಮೀಟರ್ ನಡೆದುಕೊಂಡೇ ಬಂದು ಕರ್ತವ್ಯಕ್ಕೆ ಹಾಜರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಮಗನನ್ನು ಕರೆತರಲು 1,400 ಕಿಮೀ ದೂರ ಒಬ್ಬರೇ ಸ್ಕೂಟಿಯಲ್ಲಿ ಹೋದ ತಾಯಿ
ಕಾನ್‍ಸ್ಟೆಬಲ್ ಆನಂದ್ ಪಾಂಡೆ ಕರ್ತವ್ಯಕ್ಕೆ ಹಾಜರಾಗಲು ಉತ್ತರಪ್ರದೇಶದ ಕಾನ್ಪುರದಿಂದ ಜಬಲ್‍ಪುರದವರೆಗೆ ಸುಮಾರು 450 ಕಿಲೋ ಮೀಟರ್ ದೂರ ನಡೆದುಕೊಂಡು ಬಂದಿದ್ದಾರೆ. ಆನಂದ್ ಪಾಂಡೆ ಕಾನ್ಪುರದ ಭೌತಿ ನಿವಾಸಿಯಾಗಿದ್ದು, ಜಬಲ್‍ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ತಮ್ಮ ಪತ್ನಿಗೆ ಅನಾರೋಗ್ಯದ ಕಾರಣದಿಂದ ಆನಂದ್ ಪಾಂಡೆ ಫೆಬ್ರವರಿ 20ರಿಂದ ರಜೆಯಲ್ಲಿದ್ದರು. ಇದನ್ನೂ ಓದಿ: 1 ತಿಂಗಳ ಕಂದನನ್ನ ಕೈಯಲ್ಲಿ ಹಿಡಿದುಕೊಂಡೇ ಕೆಲಸಕ್ಕೆ IAS ಅಧಿಕಾರಿ ಹಾಜರ್
ಕೊರೊನಾದಿಂದ ಲಾಕ್‍ಡೌನ್ ಆದ ಪರಿಣಾಮ ಅವರು ಕಾನ್ಪುರದಲ್ಲಿ ಸಿಲುಕಿಕೊಂಡಿದ್ದರು. ಆದರೆ ಕಾನ್‍ಸ್ಟೇಬಲ್ ಲಾಕ್‍ಡೌನ್ ಇದ್ದರೂ ಕರ್ತವ್ಯಕ್ಕೆ ಹಾಜರಾಗಲು ದೃಢ ನಿರ್ಧಾರ ಮಾಡಿದ್ದರು. ಅದರಂತೆಯೇ ಆನಂದ್ ಪಾಂಡೆ ಮಾರ್ಚ್ 30ರಂದು ಕಾನ್ಪುರದಿಂದ ಜಬಲ್‍ಪುಕ್ಕೆ ನಡೆದುಕೊಂಡೆ ಹೋಗಲು ಶುರು ಮಾಡಿದ್ದರು. ಮಾರ್ಗ ಮಧ್ಯೆ ಕೆಲವರಿಂದ ಲಿಫ್ಟ್ ಕೂಡ ತೆಗೆದುಕೊಂಡಿದ್ದರು.
ಆನಂದ್ ಪಾಂಡೆ ಕಾನ್ಪುರದಿಂದ ಜಬಲ್‍ಪುರ ತಲುಪಲು ಮೂರು ದಿನಗಳ ಕಾಲ ತೆಗೆದುಕೊಂಡಿದ್ದಾರೆ. ಆನಂದ್ ಪಾಂಡೆ ನಡೆಗೆ ಅವರ ಹಿರಿಯ ಅಧಿಕಾರಿಗಳಾದ ಇನ್ಸ್‌ಪೆಕ್ಟರ್ ಎಸ್‍ಪಿಎಸ್ ಬಘೇಲ್ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಆನಂದ್ ಪಾಂಡೆ ಲಾಕ್‍ಡೌನ್ ಕರ್ಫ್ಯೂ ನಡುವೆ ಜಬಲ್‍ಪುರದ ಘಂಟಘರ್ ಚೌಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.