ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿವಂಗತ ಅಂಬರೀಷ್ ಅಂತ್ಯಕ್ರಿಯೆಯಲ್ಲಿ ಒಂಚೂರು ಗಲಾಟೆಯಾಗದಂತೆ ಬಂದೋಬಸ್ತ್ ಮಾಡಿದ್ದ ಬೆಂಗಳೂರು ಪೊಲೀಸ್ ಕಮೀಷನರ್ ಹೀರೋ ಆಗಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ಪೊಲೀಸ್ ಆಯುಕ್ತರ ಮುಡಿಗೆ ಕಿರೀಟವೊಂದು ಬಂದು ಸೇರಿದೆ.
ಅಂಬಿ ಅಂತ್ಯಕ್ರಿಯೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಇದೀಗ ಕ್ರೈಂ ಡಿಟೆಕ್ಷನ್‍ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಿಂದಿನ ಯಾವ ಕಮೀಷನರ್ ಗಳ ಅವಧಿಯಲ್ಲೂ ಆಗದಷ್ಟು ಹೆಚ್ಚಿನ ಕ್ರೈಂ ಡಿಟೆಕ್ಷನ್ ಸುನೀಲ್ ಕುಮಾರ್ ಅವಧಿಯಲ್ಲಿ ಆಗಿದೆ.
ಈ ವರ್ಷ ನವೆಂಬರ್ ಅಂತ್ಯದ ತನಕ ನಗರದಲ್ಲಿ ಒಟ್ಟು 202 ಕೊಲೆಗಳಾಗಿದೆ. ಇದರಲ್ಲಿ 194 ಕೇಸ್ ಡಿಟೆಕ್ಟ್ ಆಗಿದ್ದು, ಕೊಲೆ ಹಂತಕರನ್ನು ಜೈಲಿಗಟ್ಟಿದ್ದಾರೆ. 636 ದರೋಡೆ ಪ್ರಕರಣಗಳು ದಾಖಲಾಗಿದ್ದು, 411 ರಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಅಲ್ಲದೇ ಪೊಲೀಸರ ನಿದ್ದೆ ಕೆಡಿಸಿದ ಸರಗಳ್ಳತನ ಪ್ರಕರಣಗಳ 289 ಕೇಸ್ ವರದಿಯಾಗಿದ್ದು, ಅದರಲ್ಲಿ 206 ಕೇಸ್ ಪತ್ತೆ ಮಾಡಲಾಗಿದೆ. ಈ ವರ್ಷದಲ್ಲಿ 5023 ಮೋಟಾರ್ ವಾಹನಗಳು ಕಳವಾಗಿದ್ದು, 1296 ವಾಹನಗಳನ್ನ ಪತ್ತೆ ಮಾಡಲಾಗಿದೆ. ಈ ವರ್ಷ 2701 ಚೀಟಿಂಗ್ ಕೇಸ್ ಗಳು ದಾಖಲಾಗಿದ್ದು, 1015 ಕೇಸ್ ಗಳಲ್ಲಿ ನ್ಯಾಯ ಕೊಡಿಸಲಾಗಿದೆ.
ದುರಂತ ಅಂದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗದೇ ಇರುವುದು. ಈ ವರ್ಷ ಬರೋಬ್ಬರಿ 350 ಪೋಕ್ಸೋ ಕೇಸ್ ಗಳು ದಾಖಲಾಗಿದ್ದು, 339 ಮಂದಿ ಆರೋಪಿಗಳನ್ನ ಜೈಲಿಗಟ್ಟಲಾಗಿದೆ. 750 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿ 560 ಕೇಸ್ ಗಳನ್ನು ಪರಿಹರಿಸಲಾಗಿದೆ. ಸ್ವಾರಸ್ಯದ ಸಂಗತಿ ಅಂದರೆ ದಾಖಲಾದ 98 ರೇಪ್ ಕೇಸ್ ಗಳಲ್ಲಿ ಅಷ್ಟು ಮಂದಿಗೂ ನ್ಯಾಯ ಕೊಡಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಕ್ರೈಂ ಡಿಟೆಕ್ಷನ್ ಮೇಲುಗತಿಯಲ್ಲಿ ಸಾಗಿದೆ. ಹಗಲು ರಾತ್ರಿ ದುಡಿದು ಸಾಕಷ್ಟು ಕೇಸ್ ಗಳನ್ನ ಪತ್ತೆ ಹಚ್ಚುವಲ್ಲಿ ಎಲ್ಲಾ ಪೊಲೀಸರು ಶ್ರಮಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv



