ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಸೀಜ್ ಅದ ವಾಹನ ಸವಾರರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುಡ್‍ನ್ಯೂಸ್ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತೀರ್ಮಾನದಂತೆ ನಾಳೆಯಿಂದ ಸೀಜ್ ಆಗಿರುವ ವಾಹನಗಳ ಬಿಡುಗಡೆ ಮಾಡಲಾಗುತ್ತದೆ. ಆದರೆ ಏಕಾಏಕಿ ಜನರು ಬರುವ ಸಾಧ್ಯತೆಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ಮಾರ್ಚ್ 30ರಿಂದ ಸೀಜ್ ಮಾಡಲಾಗಿದೆ. ಈವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಈಗ ವಾಹನಗಳನ್ನು ದಾಖಲಾತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲವನ್ನೂ ಒಂದೇ ದಿನ ಕೊಡುವುದಿಲ್ಲ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ನಿನ್ನೆ, ಮೊನ್ನೆ ಸೀಜ್ ಮಾಡಿದ ವಾಹನಗಳನ್ನು ನಾಳೆಯೇ ರಿಲೀಸ್ ಮಾಡುವುದಿಲ್ಲ. ಮಾರ್ಚ್ 30ರಂದು ಸೀಜ್ ಆದ ವಾಹಗಳನ್ನ ಮೊದಲು ಬಿಡುಗಡೆ ಮಾಡುತ್ತೇವೆ. ಆ ಬಳಿಕ ಕ್ಯಾಲೆಂಡರ್ ಸಿದ್ಧಪಡಿಸಿ ಅದರಂತೆ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡುತ್ತೇವೆ. ಜೊತೆಗೆ ಕೋರ್ಟ್ ಫೈನ್ ನೋಡಿಕೊಂಡು ಆ ನಿಯಮದ ಪ್ರಕಾರ ಆಯಾಯ ಪೊಲೀಸ್ ಠಾಣೆಗಳಲ್ಲೇ ವಾಹನಗಳನ್ನು ರಿಲೀಸ್ ಮಾಡಲಾಗುವುದು ಎಂದರು.
ಇನ್ನುಮುಂದೆ ವಾಹನಗಳನ್ನು ಸೀಜ್ ಮಾಡಲ್ಲ ಎಂದುಕೊಂಡರೆ ಅದು ತಪ್ಪು. ಇವತ್ತು ಕೂಡ ನಾವು ವಾಹನಗಳನ್ನು ವಶಕ್ಕೆ ಪಡೆಯಬಹುದು. ಲಾಕ್‍ಡೌನ್ ಸಂಪೂರ್ಣವಾಗಿ ತೆಗೆಯುವವರೆಗೂ ಪಾಸ್ ಇಲ್ಲದ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.