ಮಂಡ್ಯ: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇಂದು ನಾಗಮಂಗಲ ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ಪೊಲೀಸರು ಸುಮಲತಾ ಅವರು ಬರುವ ದಾರಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಸ್ವಲ್ಪ ಹೊತ್ತು ಕೂಡಿ ಹಾಕಿದ್ದರು.
Advertisement
ನಾಗಮಂಗಲದ ಚಾಮಲಾಪುರ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪ್ರಚಾರ ನಡೆಸುತ್ತಿದ್ದ ಹಿನ್ನೆಲೆ ಈ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದೇ ವೇಳೆ ಸುಮಲತಾ ಅವರು ಕೂಡ ಚಾಮಲಾಪುರ ಮಾರ್ಗವಾಗಿ ಬೆಳ್ಳೂರು ಕಡೆಗೆ ಹೋಗುತ್ತಿದ್ದರು. ಹೀಗಾಗಿ ಮುಂಜಾಗೃತೆ ಕ್ರಮವಾಗಿ ಚಾಮಲಾಪುರ ಗ್ರಾಮದಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಬಂಗಲೆಯೊಂದರ ಕಾಂಪೌಂಡ್‍ನಲ್ಲಿ ಪೊಲೀಸರು ಕೂಡಿ ಹಾಕಿದ್ದರು.
Advertisement
Advertisement
ಬೆಳ್ಳೂರು ಗ್ರಾಮ ಅತಿಸೂಕ್ಷ್ಮ ಪ್ರದೇಶ ಆಗಿರುವುದರಿಂದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾದಾಗ ಯಾವುದೇ ಸಮಸ್ಯೆ ಆಗಬಾರದೆಂದು, ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಸುಮಾರು ಒಂದು ಕಿಲೋಮೀಟರ್ ರಸ್ತೆಯುದ್ದಕ್ಕೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೆ ಸುಮಲತಾ ಅವರು ಹೋಗುವಾಗ ವಿರೋಧವಾಗಿ ಜೈಕಾರ ಕೂಗದಂತೆ ಜೆಡಿಎಸ್ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.
Advertisement
ಸುಮಲತಾ ಅವರು ಚಾಮಲಾಪುರ ಮಾರ್ಗದಲ್ಲಿ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇದೇ ಸ್ಥಳದಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಕೂಡ ಐದು ನಿಮಿಷ ಗೇಟಿನಲ್ಲೇ ಪೊಲೀಸರು ತಡೆಹಿಡಿದಿದ್ದರು. ಈ ವೇಳೆ ಪೊಲೀಸರನ್ನು ಜೆಡಿಎಸ್ ಶಾಸಕ ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡ ಬಳಿಕ ನಿಖಿಲ್ ಅವರ ವಾಹನವನ್ನು ಪೊಲೀಸರು ಬಿಟ್ಟು ಕಳುಹಿಸಿದರು.