ಬೆಳಗಾವಿ: `ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ನಿರ್ಮಾಪಕ ಆನಂದ್ ಅಪ್ಪುಗೋಳ್ ಮತ್ತೆ ಬಂಧನವಾಗಿದ್ದಾರೆ.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೊಸೈಟಿಯಿಂದ ಬಹುಕೋಟಿ ಠೇವಣಿ ವಂಚನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುರಿತು ಖಡೇಬಜಾರ್ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಬಳಿಕ ಸೊಸೈಟಿ ಅಧ್ಯಕ್ಷನಾಗಿದ್ದ ಆನಂದ್ ಅಪ್ಪುಗೋಳ್ ರನ್ನು ತಡರಾತ್ರಿ ಬಂಧಿಸಲಾಗಿದೆ.
ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ನಾವು ಹಣ ಠೇವಣಿ ಮಾಡಿದ್ದೆವು. ಆದರೆ ಅಪ್ಪುಗೋಳ್ ವಂಚನೆ ಮಾಡಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದು, ಸೋಮವಾರ ನೂರಾರು ಗ್ರಾಹಕರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ನಮ್ಮ ಹಣ ನಮಗೆ ಕೊಡಿಸುವಂತೆ ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದರು. ಆದ್ದರಿಂದ ಪೊಲೀಸರು ಕಾರ್ಯಚರಣೆ ನಡೆಸಿ ತಡರಾತ್ರಿ ಅಪ್ಪುಗೋಳ್ ಅವರನ್ನು ಬಂಧಿಸಿದ್ದಾರೆ.
ಈ ಹಿಂದೆಯೂ ಕೂಡ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿದ್ದ ಅಪ್ಪುಗೋಳ್ ಅವರು ಸಾರ್ವಜನಿಕರ ಠೇವಣಿ ಹಣವನ್ನು ಸಕಾಲಕ್ಕೆ ಪಾವತಿಸದೆ ಗ್ರಾಹಕರಿಗೆ ವಂಚನೆ ಮಾಡಿರುವ ಕುರಿತು ಬೆಳಗಾವಿಯ ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಯಣ್ಣ ಸೊಸೈಟಿಯ ಠೇವಣಿದಾರರಿಗೆ ನಂಬಿಕೆ ದ್ರೋಹ, ಮೋಸ, ವಂಚನೆ ಮಾಡಿದ ಆರೋಪದಲ್ಲಿ ಸೆ. 4ರಂದು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಂದ ಬ್ಯಾಂಕ್ ಅಧ್ಯಕ್ಷರು, ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ್ ಸೇರಿ ಆಡಳಿತ ಮಂಡಳಿ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ ಅಂತಾ ದೂರು ದಾಖಲಿಸಿದ್ದರು.
ಕೆಲ ಕಾಲ ತಲೆಮರೆಸಿಕೊಂಡಿದ್ದ ಅಪ್ಪುಗೋಳ್ ಅವರನ್ನು ಸೆ.17 ರಂದು ಪೊಲೀಸರು ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅಪ್ಪುಗೋಳ್ ಅವರಿಗೆ ಧಾರವಾಡ ಸಂಚಾರಿ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv