– 20ರ ಯುವತಿಯ ಮೇಲೆ ಹಿರಿಯ ನಟನ ಪುತ್ರನಿಂದ ಅತ್ಯಾಚಾರ
– ವಿಡಿಯೋ ಅಪ್ಲೋಡ್ ಮಾಡೋದಾಗಿ ಬೆದರಿಕೆ
ಚೆನ್ನೈ: ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಮಿಳಿನ ಹಿರಿಯ ನಟ ಸೂರ್ಯಕಾಂತ್ ಅವರ ಮಗ ವಿಜಯ್ ಹರೀಶ್‍ನನ್ನು ತಿರುವೊಟ್ಟಿಯೂರ್ ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ವಿಜಯ್ ಹರೀಶ್ (25) ಅಣ್ಣಾ ನಗರದ ನಿವಾಸಿಯಾಗಿದ್ದು, ಅತ್ಯಾಚಾರದ ವಿಡಿಯೋವನ್ನು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ ಆರೋಪವೂ ಇದೆ. ಆರೋಪಿ ಹರೀಶ್ ಚೆನ್ನೈ ಮೂಲದ 20 ವರ್ಷದ ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯ್ ಹರೀಶ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?
ಚೆನ್ನೈನ ವಿರುಗಂಬಕ್ಕಂನಲ್ಲಿರುವ ಅಪಾರ್ಟ್ ಮೆಂಟ್‍ನಲ್ಲಿ ಇದ್ದಾಗ ಇಬ್ಬರಿಗೂ ಪರಿಚಯವಿತ್ತು. ಆದರೆ ಜನವರಿಯಲ್ಲಿ ವಿಜಯ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹರೀಶ್ ನನಗೆ ಕುಡಿಯಲು ಜ್ಯೂಸ್ ಕೊಟ್ಟಿದ್ದನು. ಆದರೆ ಅದರಲ್ಲಿ ನನಗೆ ತಿಳಿಯದಂತೆ ಮತ್ತು ಬರುವ ಔಷಧಿಯನ್ನು ಮಿಕ್ಸ್ ಮಾಡಿದ್ದನು. ಅದನ್ನು ಕುಡಿದ ನಂತರ ನನಗೆ ಪ್ರಜ್ಞೆ ತಪ್ಪಿದೆ. ಬಳಿಕ ವಿಜಯ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದ ಸಂತ್ರಸ್ತೆ ಪೊಲೀಸರಿಗೆ ಹೇಳಿದ್ದಾರೆ.
ಜನವರಿ 2 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ವಿಜಯ್ ಇಡೀ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದು, ಯಾರಿಗಾದರೂ ಈ ವಿಚಾರವನ್ನು ಹೇಳಿದರೆ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಜಯ್ ಹರೀಶ್ ಕೂಡ ಒಬ್ಬ ನಟನಾಗಿದ್ದು ‘ನಾಂಗಲುಂ ನಲ್ಲವಾಂಗಥಾನ್’ ಸಿನಿಮಾದಲ್ಲಿ ಅಭಿನಯಿಸಿದ್ದಾನೆ. ವಿಜಯ್ ತಂದೆ ಸೂರ್ಯಕಾಂತ್ ಅನೇಕ ಚಲನಚಿತ್ರಗಳಲ್ಲಿ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಎಐಎಡಿಎಂಕೆ ಸ್ಪೀಕರ್ ಕೂಡ ಆಗಿದ್ದಾರೆ.