ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ 15 ಕ್ಕೂ ಹೆಚ್ಚು ನಿರಾಶ್ರಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಶಾಲನಗರದ ವಾಲ್ಮೀಕಿ ಭವನದಲ್ಲಿ ತೆರೆಯಲಾಗಿದ್ದ ನಿರಾಶ್ರಿತ ಕೇಂದ್ರದಲ್ಲಿ ಸೂಕ್ತ ಸೌಲಭ್ಯ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಿರಾಶ್ರಿತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಉದ್ರಿಕ್ತರು ತಹಶೀಲ್ದಾರ್ ಮೇಲೆಯೇ ಹಲ್ಲೆ ನಡೆಸಿದ್ದರು. ಈ ವೇಳೆ ತಲೆಗೆ ಪೆಟ್ಟು ಬಿದ್ದಿದ್ದ ತಹಶೀಲ್ದಾರ್ ಆಸ್ಪತ್ರೆಗೆ ದಾಖಲಾಗಿದ್ದರು.
Advertisement
Advertisement
ಕೈ ಕೈ ಮಿಲಾಯಿಸುವ ವೇಳೆ ಕೆಲ ನಿರಾಶ್ರಿತರು ಸಹ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಗಳಿಂದ ದೂರು ದಾಖಲಾಗಿತ್ತು. ಗುರುವಾರ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು, ಇಂದು ಮುಂಜಾನೆ ಏಕಾಏಕಿ ನಿರಾಶ್ರಿತ ಕೇಂದ್ರಕ್ಕೆ ತೆರಳಿ ಹಲ್ಲೆ ಆರೋಪ ಸಂಬಂಧ 15 ಕ್ಕೂ ಹೆಚ್ಚು ನಿರಾಶ್ರಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಕಳೆದ 15 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕೊಡಗು ತತ್ತರಿಸಿ ಹೋಗಿತ್ತು. ಪ್ರವಾಹದಿಂದಾಗಿ ಅನೇಕರು ಬೀದಿಪಾಲಾಗಿದ್ದರು. ನಿರಾಶ್ರಿತರಾಗಿದ್ದ ಜನರನ್ನು ಸರ್ಕಾರ ನಿರಾಶ್ರಿತ ಕೇಂದ್ರಗಳಲ್ಲಿ ತಂಗುವಂತೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಆದರೆ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ತೆರೆಯಲಾಗಿದ್ದ ನಿರಾಶ್ರಿತ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸದೇ ಇದ್ದರಿಂದ ಸಾರ್ವಜನಿಕರು ರೊಚ್ಚಿಗೆದ್ದಿದ್ದರು. ನಿರಾಶ್ರಿತ ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ ಹಾಗೂ ಸರಿಯಾದ ಸಮಯಕ್ಕೆ ಊಟವನ್ನು ನೀಡುತ್ತಿಲ್ಲವೆಂದು ನಿರಾಶ್ರಿತರು ಗಂಭೀರವಾಗಿ ಆರೋಪಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv