– ರಾತ್ರಿಯಿಂದ ಗುರುವಾರ ಮುಂಜಾನೆ 2ಗಂಟೆವರೆಗೂ ನಿರಂತರ ಅತ್ಯಾಚಾರ
– ಬಾವಿಯಲ್ಲಿ ಬಿದ್ದಿದ್ದ ಸೋದರನ ರಕ್ಷಿಸಿದ ಸಂತ್ರಸ್ತೆ
ಭೋಪಾಲ್: 18 ವರ್ಷದ ಯುವತಿಯ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಏಳು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತೆ ಮಧ್ಯಪ್ರದೇಶದ ತನ್ನ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಅಂದರೆ ಏಪ್ರಿಲ್ 29-30ರಂದು ಈ ಘಟನೆ ನಡೆದಿದೆ. ಯುವತಿಯ ಮೇಲೆ ಅತ್ಯಾಚಾರ ಎಸಗುವ ಮೊದಲು ಆರೋಪಿಗಳು ಸಂತ್ರಸ್ತೆಯ ಸಹೋದರನನ್ನು ಬಾವಿಗೆ ತಳ್ಳಿ, ನಂತರ ಈ ನೀಚ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಮೂವರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಸಂತ್ರಸ್ತೆ ತನ್ನ 21 ವರ್ಷದ ಸಹೋದರನೊಂದಿಗೆ ಬೈಕಿನಲ್ಲಿ ಬುಧವಾರ ರಾತ್ರಿ ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದಳು. ಈ ವೇಳೆ ಏಳು ಆರೋಪಿಗಳು ಬೈಕನ್ನು ತಡೆದು ನಿಲ್ಲಿಸಿ ಸಂತ್ರಸ್ತೆಯ ಸಹೋದರನನ್ನು ರಾತ್ರಿ ಸುಮಾರು 8.30ಗಂಟೆಗೆ ಬಾವಿಗೆ ಎಸೆದಿದ್ದಾರೆ. ಬಳಿಕ ಆರೋಪಿಗಳು ಗುರುವಾರ ಮುಂಜಾನೆ 2ಗಂಟೆಯವರೆಗೆ ಯುವತಿಯ ಮೇಲೆ ನಿರಂತವಾಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಕೊಟ್ವಾಲಿ ಪೊಲೀಸ್ ಠಾಣೆ ಉಸ್ತುವಾರಿ ರಾಜೇಂದ್ರ ಧುರ್ವೆ ತಿಳಿಸಿದ್ದಾರೆ.
ಅತ್ಯಾಚಾರದ ಬಳಿಕ ಆರೋಪಿಗಳು ಸಂತ್ರಸ್ತೆಯನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಸಂತ್ರಸ್ತೆ ಬಾವಿಯಲ್ಲಿ ಬಿದ್ದಿದ್ದ ಸಹೋದರನನ್ನು ರಕ್ಷಿಸಿ ಬೆಳಗ್ಗೆ ತಮ್ಮ ಗ್ರಾಮವನ್ನು ತಲುಪಿದ್ದಾಳೆ. ಬಳಿಕ ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾಳೆ.
ಆರೋಪಿಗಳನ್ನು ಶುಭಮ್ ಬೇಲೆ (22), ಸಂದೀಪ್ ಖತಿಯಾ (23), ಲೋಕೇಶ್ ಸೋನಿ (22) ಮತ್ತು ಪವನ್ ಬೇಲ್ (24) ಎಂದು ಗುರುತಿಸಲಾಗಿದೆ. ಇವರಲ್ಲಿ ಶುಭಮ್ ಬೇಲೆ, ಸಂದೀಪ್ ಖತಿಯಾ ಮತ್ತು ಮೂವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಇಬ್ಬರು ಆರೋಪಿಗಳಾದ ಲೋಕೇಶ್ ಸೋನಿ ಮತ್ತು ಪವನ್ ಬೇಲ್ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.