ಆಗ್ರಾ: ಟೀಂ ಇಂಡಿಯಾ ಯುವ ವೇಗಿ ದೀಪಕ್ ಚಹಾರ್ ಮನೆಯಲ್ಲಿ 6 ಮಂದಿ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಆಗ್ರಾದ ಮನಸರೋವರ ಕಾಲೋನಿಯಲ್ಲಿ ನಡೆದಿದೆ.
ವೇಗಿ ಚಹಾರ್ ಅವರ ತಾಯಿ ಒಬ್ಬರೇ ಮನೆಯಲ್ಲಿ ಇದ್ದ ವೇಳೆ ಘಟನೆ ನಡೆದಿದ್ದು, ದರೋಡೆಕೋರರು ಮನೆಯ ಬಾಗಿಲು ತೆರೆಯಲು ಯತ್ನಿಸಿದ ವೇಳೆ ಎಚ್ಚತ್ತ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಪಡೆದ ಶಾಹಜಂಗ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ರೂಪ್ ಕಿಶೋರ್, ರಾಜ್‍ಕುಮಾರ್, ವಿಜಯ್ ಕುಶ್ವಾಹ, ದಶರಥ್, ದೀನ್‍ದಯಾಳ್ ಮತ್ತು ರಾಕೇಶ್ ಬಂಧಿತ ಆರೋಪಿಗಳಿದ್ದಾರೆ. 6 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 412 ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ದರೋಡೆ ಮಾಡಲು ಯತ್ನಿಸುವ ಮುನ್ನ ಆರೋಪಿಗಳು ಸಿಸಿಟಿವಿ ಕೇಬಲ್ ಕೂಡ ಕತ್ತರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಪಿಸ್ತೂಲ್, ಆಟೋ ರಿಕ್ಷಾ, 5 ಕಂಪ್ಯೂಟರ್ ಮಾನಿಟರ್ಸ್ ಹಾಗೂ ಇತರೇ ಮನೆಗಳಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಈಗಾಗಲೇ ಈ ಪ್ರದೇಶದಲ್ಲಿ 9 ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂದಹಾಗೇ ಚಹರ್ 2018 ರ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪರ ಪಾರ್ದಾಪಣೆ ಮಾಡಿದ್ದರು. ಅಫ್ಘಾನಿಸ್ತಾನದ ವಿರುದ್ಧದ ಮೊದಲ ಪಂದ್ಯವಾಡಿದ ಚಹರ್ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮೊದಲ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ಪಂದ್ಯವನ್ನು ಟೀಂ ಇಂಡಿಯಾ 37 ರನ್ ಅಂತರದಲ್ಲಿ ಗೆದ್ದಿತ್ತು. ಚಹರ್ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾಗವಹಿಸಿದ್ದರು.
ವಿಂಡೀಸ್ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಿಗೆ ಆಯ್ಕೆ ಆಗಿದ್ದ ಶಾರ್ದೂಲ್ ಠಾಕೂರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗೆ ಉಳಿದಿದ್ದು, ಉಮೇಶ್ ಯಾದವ್ ಈ ಸ್ಥಾನದಲ್ಲಿ ಏಕದಿನ ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಿದ್ದು, ಚಹರ್ ತಂಡಕ್ಕೆ ಆಯ್ಕೆ ಆಗುವುದರಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv