– ರೀಲ್ಸ್ ಸ್ಟಾರ್ ಬಂಧಿಸಿದ ಕೊತ್ತನೂರು ಖಾಕಿ
ಬೆಂಗಳೂರು: ಗನ್ ಮ್ಯಾನ್, ಪಾಶ್ ಕಾರುಗಳು, ಬಾಡಿಗಾರ್ಡ್ಸ್, ವಿತ್ ವೆಪನ್ ಹಾಗೂ ಕೆಜಿಗಟ್ಟಲೆ ಚಿನ್ನ ಹಾಕಿಕೊಂಡು ಶೋಕಿ ಮಾಡಲು ಹೋಗಿ ರೀಲ್ಸ್ ಸ್ಟಾರ್ (Reels Star) ಒಬ್ಬ ಜೈಲು ಸೇರಿದ್ದಾನೆ.
ಬಂಧಿತನನ್ನು ಅರುಣ್ ಕಟಾರೆ (Arun Kathare) ಎಂದು ಗುರುತಿಸಲಾಗಿದೆ. ಈತನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಎ ಕೆ 47 ಮಾದರಿಯ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಅರುಣ್ ಕಟಾರೆ ಶೋ ಅಪ್ ಮಾಡಿದ್ದಾನೆ. ಈತನ ಶೋಕಿಯಿಂದ ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ. ಮೇಲಿಂದ ಮೇಲೆ ಈ ರೀತಿಯಲ್ಲಿ ಶೋ ಅಪ್ ಕೊಡುತ್ತಿದ್ದವನ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ಕೊತ್ತನೂರು ಸಿಬ್ಬಂದಿ ನಿಗಾ ವಹಿಸಿದ್ದರು. ಈ ವೇಳೆ ಎಕೆ 47 ಹಿಡಿದು ಓಡಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಕೊತ್ತನೂರು ಪೊಲೀಸರು ಅರುಣ್ ಕಟಾರೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿರುವುದು ಬಯಲಾಗಿದ್ದು, ಇದೀಗ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಆರ್ಮ್ಸ್ ಕಾಯ್ದೆ 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿದೆ. ಬಳಿಕ ಜೈಲಿಗೆ ಕಳುಹಿಸಿದ್ದಾರೆ.