ಧಾರವಾಡ: ಸಾಹಿತಿಗಳೆಂದರೆ ಕೇವಲ ಕವಿತೆ, ಸಾಹಿತ್ಯ ರಚನೆಗೆ ಹಾಗೂ ಪ್ರಶಸ್ತಿಗಳನ್ನು ಸ್ವೀಕರಿಸಲು ಮಾತ್ರ ಸೀಮಿತವಲ್ಲ. ರಾಷ್ಟ್ರಕ್ಕೆ ಏನಾದರೂ ವಿಪತ್ತು ಎದುರಾದಾಗ ಅದಕ್ಕೆ ಸಹಾಯ ಮಾಡುವ ಹೃದಯವನ್ನೂ ಹೊಂದಿರುತ್ತಾರೆ ಎಂಬುದನ್ನು ಧಾರವಾಡ ಕಲ್ಯಾಣನಗರ ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ಅವರು ಸಾಬೀತು ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕವಿ ಕಣವಿ ಅವರು 1 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಉಳಿದ ಸಾಹಿತಿ ಹಾಗೂ ಕವಿಗಳಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಕಣವಿ ಅವರು ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ದೇಣಿಗೆ ನೀಡಿದ ಮೊದಲ ಕವಿಯಾಗಿದ್ದಾರೆ.
Advertisement
Advertisement
ಶಾಸಕ ಅರವಿಂದ ಬೆಲ್ಲದ ಅವರ ಮುಖಾಂತರ ಕವಿ ಕಣವಿ ಪಿಎಂ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ಮೊತ್ತದ ಚೆಕ್‍ನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದು ನನಗೆ ಖುಷಿಯಾಗಿದೆ. ಕೋಟ್ಯಧಿಪತಿಗಳಾದ ಕವಿಗಳು, ಸಾಹಿತಿಗಳು ಕೂಡ ಮುಕ್ತವಾಗಿ ಪರಿಹಾರ ನಿಧಿಗೆ ಸಹಾಯ ಮಾಡಬೇಕು. ಮುಂದೆಯೂ ಲಾಕ್‍ಡೌನ್ ವಿಸ್ತರಣೆ ಮಾಡಿದರೆ ಒಳ್ಳೆಯದು. ಜನ ಹೆಚ್ಚು ಹೊರಗಡೆ ಓಡಾಡಬಾರದು. ಮನೆ ಬಾಗಿಲಿಗೇ ತರಕಾರಿಗಳು ಬರುತ್ತಿದ್ದು, ಅವುಗಳನ್ನು ಖರೀದಿಸುವ ಮೂಲಕ ಹೆಚ್ಚು ಹೊರಗಡೆ ಹೋಗುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.