ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ – ಲವ್ ಜಿಹಾದ್‌ಗೆ ಮುಂದಾಗಿದ್ದ, ಮತಾಂತರಕ್ಕೆ ಯತ್ನಿಸಿದ್ದನಂತೆ ಯುವಕ

Public TV
2 Min Read
Yadgir Police

– ಹಲ್ಲೆಗೊಳಗಾದ ಯುವಕ ಸೇರಿ 16 ಜನರ ವಿರುದ್ಧ ಪೋಕ್ಸೋ ಕೇಸ್‌

ಯಾದಗಿರಿ: ಹಿಂದೂ ಬಾಲಕಿಯನ್ನ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಅನ್ಯಕೋಮಿನ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಈಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಹಲ್ಲೆಗೊಳಗಾಗಿದ್ದ ಯುವಕ ವಾಹಿದ್ ಲವ್ ಜಿಹಾದ್ (Love Jihad) ಮುಂದಾಗಿದ್ದ, ಬಾಲಕಿಯನ್ನ ಮತಾಂತರಿಸಲು ಮುಂದಾಗಿದ್ದ ಅನ್ನೋ ಆರೋಪ ಕೇಳಿಬಂದಿದೆ.

POLICE 2

ಹೌದು. ವಾಹಿದ್ ಅಪ್ರಾಪ್ತೆಯನ್ನ ಪುಸಲಾಯಿಸಿ, ಮತಾಂತರಕ್ಕೆ ಯತ್ನಿಸಿದ್ದು, ಬಾಲಕಿಯೊಂದಿಗೆ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ನಮ್ಮ ಸಮುದಾಯದ ಹಿರಿಯರೆಲ್ಲ ನಮ್ಮ ಧರ್ಮಕ್ಕೆ ಕರೆದುಕೊಳ್ಳುತ್ತಾರೆ, ಅಲ್ಲಿ ನಿನಗೆ ಬೇಕಾದಂತೆ ಇರಬಹುದು ಎಂದು ನಂಬಿಸಿದ್ದಾನೆ. ಅಲ್ಲದೇ ಆಕೆಯೊಂದಿಗೆ ಸಲುಗೆಯಿಂದ ಇದ್ದ ಕ್ಷಣಗಳನ್ನ ಫೋಟೋ, ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡೋದಕ್ಕೆ ಶುರು ಮಾಡಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಇದನ್ನೂ ಓದಿ: INDIA ಗೆದ್ದರೆ ಮೇಕೆದಾಟು ಯೋಜನೆಗೆ ತಡೆ: ಪ್ರಣಾಳಿಕೆಯಲ್ಲಿ ಡಿಎಂಕೆ ಘೋಷಣೆ

ತಾನು ಹೇಳಿದಂತೆ ಕೇಳದೇ ಇದ್ದರೆ, ವೀಡಿಯೋ ಮತ್ತು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಬಾಲಕಿ ಮನೆಯಲ್ಲಿ ವಿಷಯ ತಿಳಿಸಿದ್ದಾಳೆ. ಬಳಿಕ ಪೋಷಕರು ಬಜರಂಗದಳದ ಮುಖಂಡರಿಗೆ ತಿಳಿಸಿದ್ದಾಳೆ. ನಂತರ ಬಜರಂಗದಳದ ಮುಖಂಡರು ಯುವಕನನ್ನ ಕರೆಸಿ, ಚೆನ್ನಾಗಿ ಥಳಿಸಿ ವೀಡಿಯೋ, ಫೋಟೋಗಳನ್ನ ಡಿಲೀಟ್ ಮಾಡಿಸಿದ್ದಾರೆ. ಮತ್ತೊಮ್ಮೆ ಬಾಲಕಿ ತಂಟೆಗೆ ಬಾರದಂತೆ ಬುದ್ದಿ ಹೇಳಿದ್ದಾರೆ. ಆದ್ರೆ ಯುವಕ ಪೊಲೀಸ್ ಠಾಣೆಯಲ್ಲಿ ಪ್ರೀತಿಸುತ್ತಿದ್ದ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದ.

ಈ ಸಂಬಂಧ ಯಾದಗಿರಿ ನಗರ ಠಾಣೆಯಲ್ಲಿ 143, 147, 148, 307, 323, 341, 342, 363, 504 ಹಾಗೂ 506 ಕಲಂ ಅಡಿಯಲ್ಲಿ ಒಂಬತ್ತು‌ ಜನರ ವಿರುದ್ಧ ದೂರು ದಾಖಲಾಗಿತ್ತು. ಕೇಸ್‌ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಪೋಷಕರು ಬಾಲಕಿಯೊಂದಿಗೆ ಬಲವಂತದಿಂದ ಲೈಂಗಿಕವಾಗಿ ವರ್ತಿಸಿ, ಮತಾಂತರಕ್ಕೆ ಯತ್ನಿಸಿದ್ದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ ಹಬ್ಬದಲ್ಲಿ ಏನೆಲ್ಲಾ ವಿಶೇಷ – ಚೊಚ್ಚಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ  ಆರ್‌ಸಿಬಿ ಕಲಿಗಳು

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹೀದ್ ಸೇರಿದಂತೆ 16 ಜನರ ಮೇಲೆ ಯಾದಗಿರಿ ನಗರ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article