ನವದೆಹಲಿ: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾದ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಜಾಗೊಂಡಿದ್ದು ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.
ಎರಡು ಕಡೆಯ ವಾದವನ್ನು ಸುದೀರ್ಘವಾಗಿ ಆಲಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಇಂದು ಮಧ್ಯಾಹ್ನ 3.30ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದರು. ಆದರೆ ಇಂದು ಸಂಜೆ 5. 11 ರ ವೇಳೆಗೆ ಆದೇಶವನ್ನು ಪ್ರಕಟಿಸಿದರು.
ಸೆ.21ರಂದು ಬೆಳಗ್ಗೆ 11 ಗಂಟೆಯಿಂದ ಸುದೀರ್ಘವಾದ ವಾದ, ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ ಇಡಿ ವಾದ ವಾದ ಕೇವಲ ಊಹಾತ್ಮಕ, ಸಿನಿಮಾ ಸ್ಟೋರಿಯಂತಿದೆ. ಹೀಗಾಗಿ ಜಾಮೀನು ಮಂಜೂರು ಮಾಡಿ ಎಂದು ಕೇಳಿಕೊಂಡಿದ್ದರು.
ಇಡಿ ಪರ ವಕೀಲ ನಟರಾಜ್, ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಬಹುದೇ ಹೊರತು ಚಿನ್ನ ಬೆಳೆಯಲು ಸಾಧ್ಯ ಇಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆದಾಯ ನೋಡಿದರೆ ಕೃಷಿ ಭೂಮಿಯಲ್ಲಿ ಚಿನ್ನ ಬೆಳೆದಂತಿದೆ ಎಂದು ವಾದಿಸಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಡಿಕೆಶಿ ಚಿನ್ನ ಬೆಳೆದಿದ್ದಾರೆ – ಇಡಿ ವಕೀಲರಿಂದ ಸುದೀರ್ಘ ವಾದ
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗಿದ್ದ ಡಿಕೆಶಿಯನ್ನು ಇಡಿ ಸೆ.3 ರಂದು ಬಂಧಿಸಿತ್ತು. ಇದಾದ ಬಳಿಕ ಕೋರ್ಟ್ ಡಿಕೆಶಿಯನ್ನು ಇಡಿ ಕಸ್ಟಡಿಗೆ ನೀಡಿತ್ತು. ನಂತರ ಸೆ.17 ರಂದು ಡಿಕೆಶಿಗೆ ಕೋರ್ಟ್ ಅ.1 ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಹೈ ಬಿಪಿ ಮತ್ತು ಹೈ ಶುಗರ್ ಹಿನ್ನೆಲೆಯಲ್ಲಿ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಡಿಕೆ ಶಿವಕುಮಾರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವೈದ್ಯಾಧಿಕಾರಿಗಳು ಆರೋಗ್ಯ ಸ್ಥಿರ ಎಂಬ ವರದಿ ನೀಡಿದ ಬೆನ್ನಲ್ಲೇ ಸೆ. 19 ರಂದು ತಿಹಾರ ಜೈಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಶಿಫ್ಟ್ ಮಾಡಲಾಗಿತ್ತು. ಇದನ್ನೂ ಓದಿ: ಐಶ್ವರ್ಯಾ ಖಾತೆಯಿಂದ 108 ಕೋಟಿ ವರ್ಗಾವಣೆ – ಕೋರ್ಟಿಗೆ ಇಡಿ ಮಾಹಿತಿ