Connect with us

Bengaluru City

ಐಶ್ವರ್ಯಾ ಖಾತೆಯಿಂದ 108 ಕೋಟಿ ವರ್ಗಾವಣೆ – ಕೋರ್ಟಿಗೆ ಇಡಿ ಮಾಹಿತಿ

Published

on

ನವದೆಹಲಿ: ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಖಾತೆಯಿಂದ 108 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎನ್ನುವ ಸ್ಫೋಟಕ ವಿಚಾರ ಡಿಕೆಶಿ ಜಾಮೀನು ಅರ್ಜಿಯ ವೇಳೆ ತಿಳಿದು ಬಂದಿದೆ.

ಇಂದು ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಕುಮಾರ್ ಅವರನ್ನು ಸಂಜೆ 4 ಗಂಟೆಗೆ ಇಡಿ ಅಧಿಕಾರಿಗಳು ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಡಿಕೆ ಶಿವಕುಮಾರ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರೆ ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ವಾದಿಸಿದರು. ಎರಡು ಕಡೆಯ ವಾದ ಆಲಿಸಿದ ನ್ಯಾ. ಅಜಯ್ ಕುಮಾರ್ ಕುಹಾರ್ ಅ.1ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು. ತಮ್ಮ ಆದೇಶದಲ್ಲಿ ಕೂಡಲೇ ಡಿಕೆಶಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ಒಂದು ವೇಳೆ ಆರೋಗ್ಯ ಸರಿ ಇದ್ದು ಡಿಸ್ಚಾರ್ಜ್ ಮಾಡಲು ವೈದ್ಯರು ಅನುಮತಿ ನೀಡಿದರೆ ತಿಹಾರ್ ಜೈಲಿಗೆ ಕಳುಹಿಸಬೇಕು ಎಂದು ಸೂಚಿಸಿ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು. ಇದನ್ನು ಓದಿ: ಡಿಕೆಶಿ ಆಪ್ತೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಇಡಿಯಿಂದ ಸಮನ್ಸ್

ಇಡಿ ವಾದ ಏನಿತ್ತು?
ಐಶ್ವರ್ಯ ಖಾತೆಯಿಂದ 108 ಕೋಟಿ ರೂ. ವರ್ಗಾವಣೆ ಆಗಿದೆ. ಪುತ್ರಿಗೆ 24-25 ವರ್ಷವಾಗಿದ್ದರಿಂದ ಇದು ನಂಬಲೂ ಸಾಧ್ಯವಿಲ್ಲ. ಆದರೂ ಈ ಸತ್ಯವನ್ನು ನಂಬಲೇಬೇಕು. ಚಿಕ್ಕ ವಯಸ್ಸಿನಲ್ಲಿ ಈ ಮಟ್ಟದ ಆರ್ಥಿಕ ವ್ಯವಹಾರ ಹೇಗೆ ಸಾಧ್ಯ? ಇದು ಕೇವಲ ಬರೀ 41 ಲಕ್ಷ ರೂ.ಗೆ ಸಂಬಂಧಿಸಿದಲ್ಲ ಸಾಕಷ್ಟು ಆಳವಾಗಿ ತನಿಖೆ ಮಾಡಬೇಕು. ಬೇರೆ ಬೇರೆ ಖಾತೆಯಿಂದ ಸಾಕಷ್ಟು ದೊಡ್ಡ ಪ್ರಮಾಣದ ಹಣ ವರ್ಗಾವಣೆ ಆಗಿದೆ. 800 ಕೋಟಿ ಅಕ್ರಮ ಹಣ ವರ್ಗಾವಣೆಯಾಗಿದೆ. ಇದು ಅಕ್ರಮ ಹಣ ವರ್ಗಾವಣೆಯ ಕರಳತೆಯನ್ನು ತೋರಿಸುತ್ತದೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ನಟರಾಜ್ ವಾದಿಸಿದರು.

143 ಕೋಟಿ ರೂ. ದಾಖಲೆ ಇಲ್ಲದ ನಗದು ಹಣ ಪತ್ತೆಯಾಗಿದೆ. ಇದು ಕಾನೂನು ಬಾಹಿರ ಹಣವಾಗಿದ್ದು ಅಕ್ರಮವಾಗಿ ವರ್ಗಾವಣೆಯಾಗಿದೆ. ಈ ಹಣ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿದಾಗ 317 ಬ್ಯಾಂಕ್ ಖಾತೆಗಳಲ್ಲಿ ಅವವ್ಯಹಾರ ನಡೆದಿರುವುದು ತಿಳಿಯುತ್ತದೆ ಎಂದಾಗ ಈ ದಾಖಲೆಗಳನ್ನು ನಮಗೆ ನೀಡಿಲ್ಲ ಎಂದು ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ನಟರಾಜ್ ಅವರು, ಈಗ ಎಲ್ಲ ದಾಖಲೆಗಳು, ವಿವರಗಳನ್ನು ಬಹಿರಂಗಪಡಿಸಲು ಇದು ಟ್ರಯಲ್ ಕೋರ್ಟ್ ಅಲ್ಲ ಎಂದು ಉತ್ತರಿಸಿದರು. ಇದನ್ನು ಓದಿ: ಡಿಕೆಶಿ 317 ಖಾತೆ, 800 ಕೋಟಿ ಆಸ್ತಿ ಪತ್ತೆ

ಈ ಪ್ರಕರಣಕ್ಕೆ ಸಾಕಷ್ಟು ಮಹತ್ವ ಇದ್ದು, ಗಿಫ್ಟ್ ಡಿಡ್ ಮೂಲಕ ಪಡೆದು ಮತ್ತೊಬ್ಬರಿಗೆ ವರ್ಗಾವಣೆಯಾಗಿದೆ. ಒಂದು ಕಡೆಯಿಂದ ಪಡೆದು ಮತ್ತೊಂದು ಕಡೆ ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದೆ. ಸೆ.13 ರಂದು ನಾವು 4 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದೇವು. ನಮ್ಮ ಕಸ್ಟಡಿಗೆ ನೀಡಿದ್ದರೂ ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿಚಾರಣೆ ನಡೆಸಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಡಿ ಎಂದು ನಟರಾಜ್ ಮನವಿ ಮಾಡಿಕೊಂಡರು.

ಡಿಕೆಶಿ ಪರ ವಕೀಲರ ವಾದ ಹೀಗಿತ್ತು:
15 ಕ್ಕಿಂತ ಹೆಚ್ಚು ದಿನ ಪೋಲಿಸ್ ಕಸ್ಟಡಿಯಲ್ಲಿ ಕೊಡಲು ಸಾಧ್ಯವಿಲ್ಲ. ಅವರ ಆರೋಗ್ಯ ಅಪಾಯದಲ್ಲಿದೆ. ವಿಚಾರಣೆ ಸಾಧ್ಯವಾಗಿಲ್ಲ ಎಂದು ನ್ಯಾಯಾಂಗ ಬಂಧನ ಕೇಳುವುದು ಸರಿಯಲ್ಲ. ಇಡಿ ಕಸ್ಟಡಿಯಲ್ಲಿ ವಿಚಾರಣೆ ನಡೆಸದವರು ನ್ಯಾಯಾಂಗ ಬಂಧನದಲ್ಲಿ ವಿಚಾರಣೆ ನಡೆಸುತ್ತಾರಾ? ಆರೋಗ್ಯ ಸಮಸ್ಯೆ ಆಧಾರದ ಮೇಲೆ ಜಾಮೀನು ನೀಡಬೇಕು. 41 ಲಕ್ಷ ರೂ. ಹಣವನ್ನು ಕಕ್ಷಿದಾರರಿಂದ ವಶ ಪಡಿಸಿಕೊಂಡಿದ್ದು ಇದಕ್ಕೆ ಶಿವಕುಮಾರ್ ಉತ್ತರ ನೀಡಿದ್ದಾರೆ.

ಬೇರೆಯವರ ಬಳಿ ಸಿಕ್ಕ ಹಣಕ್ಕೂ ಡಿಕೆ ಶಿವಕುಮಾರ್ ಅವರನ್ನು ಸೇರಿಸಲಾಗುತ್ತಿದೆ. 8.59 ಕೋಟಿ ಹಣ ಶಿವಕುಮಾರ್ ಅವರದಲ್ಲ. 41 ಲಕ್ಷ ಹೊರತು ಯಾವ ಹಣವೂ ಡಿಕೆ ಶಿವಕುಮಾರ್ ಅವರದ್ದಲ್ಲ. ಇಡಿ ಪೂರ್ವಗ್ರಹ ಪೀಡಿತವಾಗಿ ತನಿಖೆ ನಡೆಸುತ್ತಿದೆ. ನಾಲ್ಕು ಕೋಟಿ ಹೆಚ್ಚುವರಿ ಹಣ ಬಗ್ಗೆ ಹಿಂದೆ ಹೇಳಿರಲಿಲ್ಲ. 50 ಸಾಕ್ಷಿಗಳು ವಿಚಾರಣೆ ನಡೆಸಿದೆ ಎಂದು ಹೇಳಿದೆ. ಆದರೆ ಅವರ ಹೆಸರುಗಳನ್ನು ಬಹಿರಂಗ ಮಾಡುತ್ತಿಲ್ಲ.

ಶಿವಕುಮಾರ್ 317 ಖಾತೆಗಳು ಹೊಂದಿದ್ದಾರೆ ಎಂದು ಇಡಿ ಆರೋಪ ಮಾಡಿದೆ. ಆದರೆ ಕಳೆದ 10 ವರ್ಷದಿಂದ 20 ಖಾತೆಗಳ ಮೂಲಕ 64 ಲಕ್ಷ ರೂ. ಮಾತ್ರ ವ್ಯವಹಾರ ನಡೆದಿದೆ. 3 ಖಾತೆ ಮೂಲಕ 200 ಕೋಟಿ ವ್ಯವಹಾರ ಆರೋಪ ಆಧಾರ ರಹಿತ. ಮಗಳ ಖಾತೆಯಲ್ಲಿ 65 ಸಾವಿರ ಮಾತ್ರ ಇತ್ತು. 10 ವರ್ಷದಲ್ಲಿ 70 ಲಕ್ಷ ಹಣ ಡಿಕೆ ಸುರೇಶ್ ಖಾತೆಯಲ್ಲಿದೆ. ತಂದೆಯಿಂದ ಆಸ್ತಿ ವರ್ಗಾವಣೆಯಾಗಿದೆ. ಹಿಂದೆ ಇದ್ದ ಆಸ್ತಿಯ ಬೆಲೆ ಈಗ ಹೆಚ್ಚಾಗಿದೆ. ಇದನ್ನು ಅಕ್ರಮ ಆಸ್ತಿ ಎಂದು ಕರೆಯುವುದು ಎಷ್ಟು ಸರಿ? ಆಸ್ತಿ ಬೆಲೆ ಏರಿಕೆ ಯಿಂದ ಸಂಪತ್ತು ಹೆಚ್ಚಾಗಿದೆ.

ಎರಡು ವರ್ಷದ ಹಿಂದೆ ನಡೆದ ದಾಳಿ ವೇಳೆ 41 ಲಕ್ಷ ರೂ.ಸಿಕ್ಕಿದ್ದು ಅದಕ್ಕೆ ದಾಖಲೆ ನೀಡಲಾಗಿದೆ. ಈಗ ಜೈಲಿನಲ್ಲಿ ಯಾಕೆ ಕೂರಬೇಕು? ಅನಾರೋಗ್ಯ ಸರಿ ಇಲ್ಲದ ಪರಿಣಾಮ ಜಾಮೀನು ನೀಡಲು ಇದು ಅರ್ಹವಾದ ಪ್ರಕರಣವಾಗಿದೆ. ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದು. ಏಳು ಬಾರಿ ಶಾಸಕರಾಗಿರುವ ಶಿವಕುಮಾರ್ ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ಒಂದು ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ನೋಡಿದರೆ ಅವರ ಮೇಲೆ ಯಾವುದೇ ಗುರುತರ ಆರೋಪ ಇಲ್ಲ. ಪ್ರತಿ ವರ್ಷವೂ ತೆರಿಗೆ ಕಟ್ಟಿಕೊಂಡು ಬಂದಿದ್ದಾರೆ. ನಾಲ್ಕು ಕೇಸ್ ನಲ್ಲಿ ಮೂರು ಪ್ರಕರಣ ವಜಾಗೊಂಡಿದ್ದು ವ್ಯಕ್ತಿಯು ಅನಾರೋಗ್ಯ ಪೀಡಿತರಾಗಿದ್ದಾರೆ. ಹೀಗಾಗಿ ಯಾವುದೇ ಷರತ್ತುಗಳನ್ನು ಹಾಕಿ ಜಾಮೀನು ನೀಡಬಹುದು ಎಂದು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಿದರು.