ಮುಂಬೈ: ನೋಟು ಅಮಾನ್ಯೀಕರಣ ವಿಫಲವಾಗಿದ್ದಕ್ಕೆ ಪ್ರಧಾನಿ ಮೋದಿ ಹೇಗೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಮೋದಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್‍ಬ್ಯಾನ್ ಮಾಡಿದ್ದರು ಎಂದು ಬಿಜೆಪಿ ವಿರುದ್ಧ ಮಿತ್ರಪಕ್ಷ ಶಿವಸೇನೆ ಕಿಡಿಕಾರಿದೆ.
ನೋಟ್ ಬ್ಯಾನ್ ಬಳಿಕ ಶೇ.99.3ರಷ್ಟು ಹಳೆಯ ನೋಟುಗಳು ವಾಪಾಸ್ಸಾಗಿವೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ. ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ದಾರಿ ತಪ್ಪಲು ಕಾರಣವಾಗಿದೆ. ನೋಟು ಅಮಾನ್ಯೀಕರಣದ ಪರಿಣಾಮದಿಂದಾಗಿ ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯಲ್ಲಿ ಕುಸಿಯುತ್ತಿದೆ. ಅಂದು ನೋಟ್ ಬ್ಯಾನ್ ನಿಂದಾಗಿ ಸುಮಾರು 100 ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಶಿವಸೇನೆ ಹೇಳಿದೆ.
ಇಂದಿನ ದೇಶದ ಆರ್ಥಿಕ ಪರಿಸ್ಥಿತಿಗೆ ಪ್ರಧಾನಿ ಮೋದಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ನೋಟು ಅಮಾನ್ಯೀಕರಣದ ವಿಫಲ ಯತ್ನಕ್ಕೆ ಯಾವ ರೀತಿಯಲ್ಲಿ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದೆ. ಕೇವಲ ಪ್ರಚಾರಕ್ಕಾಗಿ ನೋಟ್ ಬ್ಯಾನ್ ಮಾಡಲಾಗಿತ್ತು ಎಂದು ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಟೀಕಿಸಿದೆ.
500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣದ ಬಳಿಕ ಮಾತನಾಡಿದ್ದ ಪ್ರಧಾನಿ ಮೋದಿ, ನನಗೆ 50 (ಡಿಸೆಂಬರ್ 30, 2018ವರೆಗೆ) ದಿನಗಳ ಅವಕಾಶ ನೀಡಿ. ಒಂದು ವೇಳೆ ನಾನು ತೆಗೆದುಕೊಂಡಿರುವ ಈ ನಿರ್ಧಾರ ತಪ್ಪಾಗಿದ್ದರೆ, ನೀವು ನೀಡುವ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಯನ್ನಾಧರಿಸಿ ಶಿವಸೇನೆ ನಿಮ್ಮ ತಪ್ಪಿಗೆ ಪ್ರಾಯಶ್ಚಿತವೇನು ಎಂದು ವ್ಯಂಗ್ಯ ಮಾಡಿದೆ.
ಅರುಣ್ ಜೇಟ್ಲಿ ತಿರುಗೇಟು:
ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಗೊಳಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರದ ಈ ಕ್ರಮದಿಂದ ಇಂದು ದೇಶದ ಆರ್ಥಿಕತೆ ಸುಗಮವಾಗಿ ನಡೆಯಲು ಸಹಾಯಕವಾಗಿದೆ. ಅಲ್ಲದೇ ದಾಖಲೆಯ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ನೋಟು ಅಮಾನ್ಯೀಕರಣದ ಮೊದಲು 2 ವರ್ಷಗಳಲ್ಲಿ ತೆರಿಗೆ ಸಂಗ್ರಹ ಕೇವಲ ಶೇ.6.6 ರಿಂದ ಶೇ.9 ರಷ್ಟಿತ್ತು. ನೋಟು ನಿಷೇಧದ ಬಳಿಕ ಇದರ ಪ್ರಮಾಣ ಶೇ.15 ರಿಂದ ಶೇ.18ಕ್ಕೆ ಗಣನೀಯವಾಗಿ ಏರಿಕೆಯಾಗಿದೆ. 2014 ರಲ್ಲಿ ಆದಾಯ ತೆರಿಗೆ ಪಾವತಿಸುತ್ತಿದ್ದವರ ಸಂಖ್ಯೆ ಕೇವಲ 3.8 ಕೋಟಿಯಷ್ಟಿತ್ತು, ಸದ್ಯ 2017-18ನೇ ಸಾಲಿನಲ್ಲಿ 6.86 ಕೋಟಿ ಗ್ರಾಹಕರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಟೀಕಾಕಾರಿಗೆ ಉತ್ತರಿಸಿದ್ದಾರೆ.
ನೋಟು ಅಮಾನ್ಯೀಕರಣದಿಂದಾಗಿ 2016ರ ನವೆಂಬರ್ 8 ರವರೆಗು ಚಲಾವಣೆಯಲ್ಲಿದ್ದ 500 ಹಾಗೂ 1,000 ಮುಖಬೆಲೆಯ 15.41 ಲಕ್ಷ ಕೋಟಿ ರೂಪಾಯಿಗಳ ಪೈಕಿ 15.31 ಲಕ್ಷ ಕೋಟಿ ರೂಪಾಯಿಗಳು ಭಾರತೀಯ ರಿಸರ್ವ್ ಬ್ಯಾಂಕಿಗೆ ಜಮೆಯಾಗಿದೆ.
ಹೊಸ ನೋಟುಗಳ ಮುದ್ರಣದ ವೆಚ್ಚ:
ನೋಟು ನಿಷೇಧದ ಬಳಿಕ 2016-17 ರ ಅವಧಿಯಲ್ಲಿ ಆರ್‍ಬಿಐ 7,965 ಕೋಟಿ ರೂ. ಗಳನ್ನು ಹೊಸ 500 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟು ಮುದ್ರಣಕ್ಕಾಗಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ ಕಳೆದ ವರ್ಷದಲ್ಲಿ ಮಾಡಿದ್ದ ವೆಚ್ಚಕ್ಕಿಂತಲೂ ಎರಡರಷ್ಟು ಹೆಚ್ಚಾಗಿದೆ. ಇನ್ನು 2017-18 (ಜುಲೈ 2017 ರಿಂದ ಜೂನ್ 2018) ಅವಧಿಯಲ್ಲಿ 4,912 ಕೋಟಿ ರೂ. ಗಳನ್ನು ನೋಟು ಮುದ್ರಣಕ್ಕಾಗಿ ಆರ್‍ಬಿಐ ವೆಚ್ಚಮಾಡಿದೆ.
ನೋಟು ನಿಷೇಧ ವೇಳೆ ಈ ಕ್ರಮ ಕಪ್ಪು ಹಣದ ಪತ್ತೆ, ಭ್ರಷ್ಟಚಾರ ನಿಯಂತ್ರಣ ಮತ್ತು ಖೋಟಾ ನೋಟು ಪರಿಶೀಲನೆಗೆ ಸಹಾಯವಾಗುತ್ತದೆ ಎಂಬ ವಾದ ಕೇಳಿ ಬಂದಿತ್ತು. ಆದರೆ ಈ ವೇಳೆ 500 ರೂ. ಹಾಗೂ 1 ಸಾವಿರ ರೂ ಮುಖಬೆಲೆ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 59.7% ಮತ್ತು 59.6% ಕಡಿಮೆ ಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 100 ರೂ. ಹಾಗೂ 50 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 35%, 154.3% ರಷ್ಟು ಪತ್ತೆಯಾಗಿದೆ. ನೋಟು ನಿಷೇಧ ಕ್ರಮದಿಂದಾಗಿ 2017-18 ಆರ್ಥಿಕ ವರ್ಷದ ಮೇಲೆ ಪ್ರಭಾವ ಬೀರಿತ್ತು ಎಂದು ಆರ್ ಬಿಐ ಹೇಳಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv