ಹೈದರಾಬಾದ್: ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಹೇಳಿಕೆ ಆಕ್ಷೇಪಾರ್ಹವೇ ಅಥವಾ ಇಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಾಲ್ಯ ಸ್ನೇಹಿತ ಅಬ್ಬಾಸ್ ಅವರನ್ನು ಕೇಳಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಲಹೆ ಕೊಟ್ಟರು.
ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ 100ನೇ ವರ್ಷದ ಹುಟ್ಟು ಹಬ್ಬದ ವೇಳೆ ಮೋದಿ ಅವರು ತಮ್ಮ ಬಾಲ್ಯ ಸ್ನೇಹಿತ ಅಬ್ಬಾಸ್ ಬಗ್ಗೆ ಬರೆದು ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಇದೇ ವಿಷಯವನ್ನು ತೆಗೆದುಕೊಂಡು ಓವೈಸಿ, ಪ್ರಧಾನಿ ಮೋದಿ ಅವರು ತಮ್ಮ ಬಾಲ್ಯದ ಸ್ನೇಹಿತನನ್ನು ಸುಮಾರು 8 ವರ್ಷಗಳ ನಂತರ ನೆನಪಿಸಿಕೊಂಡಿದ್ದಾರೆ. ನಮಗೂ ಸಹ ನಮಗೆ ಈ ಸ್ನೇಹಿತ ಇದ್ದಾರೆ ಎಂದು ತಿಳಿದಿರಲಿಲ್ಲ ಎಂದು ಮಾತನ್ನು ಪ್ರಾರಂಭಿಸಿದರು.
ನಾನು ಇಂದು ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಒಮ್ಮೆ ನಿಮ್ಮ ಸ್ನೇಹಿತ ಅಬ್ಬಾಸ್ ಅವರನ್ನು ಅಸಾದುದ್ದೀನ್ ಓವೈಸಿ ಮತ್ತು ಉಲೇಮಾಗಳ ಭಾಷಣಗಳನ್ನು ಕೇಳುವಂತೆ ಮಾಡಿ. ಆಗ ನಾವು ಸುಳ್ಳು ಹೇಳುತ್ತಿದ್ದೇವೆಯೇ ಎಂಬುದನ್ನು ಕೇಳಿ ಎಂದು ತಿಳಿಸಿದರು.
ನಿಮಗೆ ಕೇಳಲು ಸಾಧ್ಯವಾಗಿಲ್ಲವೆಂದರೆ ನಮಗೆ ಅಬ್ಬಾಸ್ ವಿಳಾಸವನ್ನು ಕೊಡಿ. ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ಹೇಳಿರುವ ಹೇಳಿಕೆ ಸರಿನಾ ಎಂದು ನಾವೇ ಕೇಳುತ್ತೇವೆ. ಅವರು ಸಹ ಆಕೆ ಸರಿಯಾಗಿ ಮಾತನಾಡಿಲ್ಲವೆಂದು ಒಪ್ಪಿಕೊಳ್ಳುತ್ತಾರೆ ಎಂದರು.
ನೀವು ನಿಮ್ಮ ಗೆಳೆಯನನ್ನು ನೆನಪಿಸಿಕೊಂಡಿದ್ದೀರಾ. ಇದೊಂದು ಕಥೆಯಿರುವ ಸಾಧ್ಯತೆಯೂ ಇದೆ. ಈ ಬಗ್ಗೆ ನೀವು ಹೇಳುತ್ತಿರುವುದು ಸರಿನಾ ಎಂದು ನನಗೆ ಹೇಗೆ ಗೊತ್ತು! ಅಲ್ಲದೇ ಅವರು ‘ಅಚ್ಛೇ ದಿನ್’ ಭಾರತಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಆದರೆ ಎಲ್ಲಿ ಬಂತು ಎಂದು ಪ್ರಶ್ನೆ ಮಾಡಿದರು.
ಮೋದಿ ಪೋಸ್ಟ್‌ನಲ್ಲಿ ಏನಿದೆ?
ನನ್ನ ತಂದೆಯ ಆಪ್ತ ಸ್ನೇಹಿತ ಪಕ್ಕದ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ಅವರ ಗೆಳೆಯನ ಮಗ ಅಬ್ಬಾಸ್‍ನನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಆತ ನಮ್ಮ ಜೊತೆ ಇದ್ದು ಶಿಕ್ಷಣ ಪೂರೈಸಿದ್ದ. ನನ್ನ ಅಮ್ಮ ಸಹ ಅವನನ್ನು ಪ್ರೀತಿಯಿಂದ ನಮ್ಮನ್ನು ನೋಡಿಕೊಳ್ಳುವ ರೀತಿಯಲ್ಲಿಯೇ ನೋಡಿಕೊಳ್ಳುತ್ತಿದ್ದರು. ಈದ್ ಸಮಯದಲ್ಲಿ ಅವನಿಗೆ ಇಷ್ಟವಾದ ತಿನಿಸುಗಳನ್ನು ಮಾಡಿಕೊಡುತ್ತಿದ್ದಳು ಎಂದು ಬರೆದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.