ನವದೆಹಲಿ: ನಾನು ನನ್ನನ್ನೂ ಒಮ್ಮೆಯೂ ಪ್ರಧಾನಿಯಾಗಿ ನೋಡಲಿಲ್ಲ, ದಾಖಲೆಗಳಿಗೆ ಸಹಿ ಹಾಕುವಾಗ ಮಾತ್ರ ಪ್ರಧಾನಮಂತ್ರಿಯ ಜವಾಬ್ದಾರಿ ನಿಭಾಯಿಸುತ್ತೇನೆ. ಬಾಕಿ ಎಲ್ಲ ಸಮಯದಲ್ಲೂ ನನ್ನ ಜೀವನದಲ್ಲಿ ಎಲ್ಲವೂ ಆಗಿರುವ 130 ಕೋಟಿ ಜನರ ಪ್ರಧಾನ ಸೇವಕನಾಗಿರುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಎನ್‍ಡಿಎ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಎಂಟು ವರ್ಷ ಪೂರ್ಣವಾಗಿರುವ ಹಿನ್ನಲೆ ಇಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಗರೀಬ್ ಕಲ್ಯಾಣ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ 9 ಇಲಾಖೆಗಳ ಯೋಜನೆಗಳ ಬಗ್ಗೆ ವಿವಿಧ ರಾಜ್ಯಗಳ ಜನರ ಜೊತೆಗೆ ಮೋದಿ ಸಂವಾದ ನಡೆಸಿ, ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
2014ರ ಮೊದಲು ಸರ್ಕಾರವು ಭ್ರಷ್ಟಾಚಾರವನ್ನು ವ್ಯವಸ್ಥೆಯ ಅವಿಭಾಜ್ಯ ಅಂಗವೆಂದು ಪರಿಗಣಿಸಿತ್ತು. ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು ಅದಕ್ಕೆ ಶರಣಾಗಿತು. ಯೋಜನೆಗಳ ಹಣ ನಿಗದಿತ ಸ್ಥಳಕ್ಕೆ ತಲುಪುವ ಮೊದಲು ಲೂಟಿ ಮಾಡಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದೆ. ಆನ್‍ಲೈನ್ ವಹಿವಾಟು ಮೂಲಕ ಫಲಾನುಭವಿಗಳ ಖಾತೆಗೆ ಹಣ ಸೇರುತ್ತಿದೆ ಎಂದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಬೆಂಬಲ ಕೇಳಿದ ರೇವಣ್ಣ
ನಮ್ಮ ಸರ್ಕಾರ ಬಡವರಿಗೆ ಬ್ಯಾಂಕ್ ಖಾತೆ ಮಾಡಿಸಿಕೊಟ್ಟಿತ್ತು. ಆಧಾರ್ ಮತ್ತು ಮೊಬೈಲ್ ನಂಬರ್ ಜೋಡಿಸುವ ಮೂಲಕ ತ್ರಿಶಕ್ತಿ ರೂಪಿಸಿ ಭದ್ರತೆ ಹೆಚ್ಚಿಸಿತು. ಈಗ ಈ ಬಗ್ಗೆ ಎಲ್ಲ ಕಡೆ ಚರ್ಚೆಯಾಗುತ್ತಿದೆ. ಮೊದಲು ಅಡುಗೆ ಮನೆಯಲ್ಲಿ ಒಲೆ ಊದುವುದು ಅನಿವಾರ್ಯವಾಗಿತ್ತು. ಆದರೆ ನಾವು ಉಜ್ವಲ ಯೋಜನೆ ಮೂಲಕ ಸಿಲಿಂಡರ್ ನೀಡುತ್ತಿದ್ದೇವೆ ಎಂದು ಹೇಳಿದರು.
Addressing ‘Garib Kalyan Sammelan’ in Shimla. Watch. https://t.co/XEekMT4DYQ
— Narendra Modi (@narendramodi) May 31, 2022
ಮೊದಲು ಚಿಕಿತ್ಸೆಗಾಗಿ ಹಣ ಸಂಗ್ರಹಿಸಲು ಅಸಹಾಯಕರಾಗುತ್ತಿದ್ದರು. ಆದರೆ ಇಂದು ಪ್ರತಿಯೊಬ್ಬ ಬಡವರಿಗೂ ಆಯುಷ್ಮಾನ್ ಭಾರತ್ ಬೆಂಬಲವಿದೆ. ಮೊದಲು ತ್ರಿವಳಿ ತಲಾಖ್ ಭಯವಿತ್ತು, ಈಗ ಮುಸ್ಲಿಂ ಮಹಿಳೆಯರಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಧೈರ್ಯ ಬಂದಿದೆ. ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ನಮ್ಮ ಯೋಜನೆಗಳು ವರದಾನವಾಗಿವೆ. ಈಗ ಸರ್ಕಾರ ಬಾಸ್ ಅಲ್ಲ, ಅದು ಜನರ ಸೇವಕನಾಗಿ ಬದಲಾಗಿದೆ. ಇದನ್ನೂ ಓದಿ: ಕರ್ನಾಟಕ ಅತಿ ದೊಡ್ಡ ಕೂಗು ಮಾರಿ ಅಂದ್ರೆ ಅದು ಸಿದ್ದರಾಮಯ್ಯ: ಪ್ರತಾಪ್ ಸಿಂಹ
ಪ್ರಧಾನಮಂತ್ರಿ ವಸತಿ ಯೋಜನೆ, ವಿದ್ಯಾರ್ಥಿವೇತನ ಅಥವಾ ಪಿಂಚಣಿ ಯೋಜನೆಗಳು ತಂತ್ರಜ್ಞಾನದ ಸಹಾಯದಿಂದ ನಾವು ಭ್ರಷ್ಟಾಚಾರದ ವ್ಯಾಪ್ತಿಯನ್ನು ಕಡಿಮೆ ಮಾಡಿದ್ದೇವೆ. ಆಜಾದಿ ಕಾ ಅಮೃತ್ ಮಹೋತ್ಸವದ ಸಮಯದಲ್ಲಿ ನಮ್ಮ ಯುವಕರು ಮತ್ತು ಮಹಿಳಾ ಶಕ್ತಿಯಲ್ಲಿ ವಿಶ್ವಾಸದಿಂದ ನವ ಭಾರತದತ್ತ ಪ್ರಗತಿಯನ್ನು ಕಾಣಬಹುದು. ಸ್ಟಾರ್ಟಪ್‌ಗಳ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದ್ದು ಸಾರ್ವಜನಿಕರಿಗೂ ಲಾಭವಾಗಿದೆ ಎಂದರು.