ಮೋದಿ, ಶಾ ಮೇಲೆ ದಾಳಿಗೆ ಉಗ್ರರ ಸ್ಕೆಚ್- ದೇಶದ 30 ಕಡೆ ಭಾರೀ ದಾಳಿಗೂ ಸಂಚು

Public TV
2 Min Read
modi shah

-ಗುಪ್ತಚರ ಮಾಹಿತಿ ಬೆನ್ನಲ್ಲೇ ಹೈ ಅಲರ್ಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲದ ಜೈಶ್ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ 370ನೇ ವಿಧಿ ರದ್ದತಿಯಿಂದ ಪಾಕಿಸ್ತಾನಿ ಉಗ್ರರು ಹತಾಶರಾಗಿದ್ದಾರೆ. ಆದ್ದರಿಂದ 370ನೇ ವಿಧಿ ರದ್ದು ಮಾಡಲು ಆದ್ಯತೆ ನೀಡಿದ ಮೋದಿ, ಶಾ ಹಾಗೂ ದೋವಲ್ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ವಿಮಾನಯಾನ ಭದ್ರತಾ ಬ್ಯೂರೋಗೆ ಉಗ್ರರ ದಾಳಿಯ ಬಗ್ಗೆ ಅನಾಮಿಕ ಪತ್ರ ಬಂದಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

Ajit Doval NSA

ಅಷ್ಟೇ ಅಲ್ಲದೆ 370ನೇ ವಿಧಿ ರದ್ಧತಿಗೆ ಉಗ್ರರು ಪ್ರತಿಕಾರ ತೀರಿಸಿಕೊಳ್ಳುವುದಾಗಿ ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಮೋದಿ, ಶಾ ಹಾಗೂ ದೋವಲ್ ಅವರು ಪಾಕಿಸ್ತಾನಿ ಉಗ್ರರ ಹಿಟ್-ಲೀಸ್ಟ್‌ನಲ್ಲಿ ಇದ್ದಾರೆ ಎಂದು ತಿಳಿದ ತಕ್ಷಣ ಅಧಿಕಾರಿಗಳು ಎಲ್ಲೆಡೆ ಹೈ ಅಲರ್ಟ್ ಘೋಷಿಸಿದ್ದಾರೆ.

30 ನಗರಗಳಲ್ಲಿ ದಾಳಿಗೆ ಉಗ್ರರ ಸ್ಕೆಚ್
ರಾಷ್ಟ್ರೀಯ ವಿಮಾನಯಾನ ಭದ್ರತಾ ಬ್ಯೂರೋಗೆ ಸಿಕ್ಕಿರುವ ಪತ್ರದಲ್ಲಿ, ಜೈಷ್-ಇ-ಮೊಹ್ಮದ್ ಸಂಘಟನೆ ಉಗ್ರರು ದೇಶದ 30 ನಗರಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ. ಪಠಾಣ್‍ಕೋಟ್, ಅಮೃತ್‍ಸರ್, ಜೈಪುರ, ಗಾಂಧಿನಗರ, ಲಕ್ನೋ, ಕಾನ್ಪುರ ಸೇರಿದಂತೆ ಜಮ್ಮುವಿನಲ್ಲೂ ದಾಳಿ ನಡೆಸಲು ಸ್ಕೆಚ್ ಹಾಕಿದ್ದಾರೆ. ಜೊತೆಗೆ ದೇಶದ 4 ವಿಮಾನ ನಿಲ್ದಾಣಗಳ ಮೇಲೂ ದಾಳಿ ನಡೆಸಲು ಪ್ಲಾನ್ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ ಎನ್ನಲಾಗಿದೆ.

kashmir 759 11

ಈ ಹಿಂದೆ ಲಷ್ಕರ್-ಇ-ತೈಬಾ(ಎಲ್‍ಇಟಿ) ಉಗ್ರ ಸಂಘಟನೆ ಮೋದಿ ಅವರ ಕ್ಷೇತ್ರ ವಾರಣಾಸಿ ಮೇಲೆ ದಾಳಿಗೆ ಸಂಚು ರೂಪಿಸಿತ್ತು ಎಂದು ವರದಿಯಾಗಿತ್ತು. ಅಲ್ಲದೆ ಎಲ್‍ಇಟಿ ಮುಖ್ಯಸ್ಥ ಹಾಫೀಜ್ ಸಯೀದ್ ನಿರಂತರವಾಗಿ ವಾರಣಾಸಿಯಲ್ಲಿ ದಾಳಿ ನಡೆಸಲು ಪ್ರಯತ್ನಿಸಿದ್ದನು ಎನ್ನಲಾಗಿದೆ. ಗುಪ್ತಚರ ಇಲಾಖೆ ವರದಿ ಪ್ರಕಾರ, ಎಲ್‍ಇಟಿ ಉಗ್ರರು ವಾರಣಾಸಿಯಲ್ಲಿ ದಾಳಿ ನಡೆಸಲು ನಿರಂತರ ಪಿತೂರಿ ನಡೆಸುತ್ತಿದ್ದಾರೆ. ಈ ದಾಳಿಗಳ ಮೂಲಕ ವಾರಣಾಸಿಯಲ್ಲಿ ತಮ್ಮ ನೆಲೆ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *