ನವದೆಹಲಿ: ತಮಿಳುನಾಡಿನ ರಾಮೇಶ್ವರಂನಲ್ಲಿ ರಾಮನವಮಿಯಂದು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಪಂಬನ್ ಎಂದು ಕರೆಯಲ್ಪಡುವ ಈ ರೈಲು ಸೇತುವೆಯನ್ನು 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಮಧ್ಯಾಹ್ನ 12 ಗಂಟೆಗೆ ಪಂಬನ್ ಮತ್ತು ರಾಮೇಶ್ವರಂ ನಡುವಿನ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು (Vertical Lift Sea Bridge) ಮೋದಿ ಉದ್ಘಾಟಿಸಲಿದ್ದಾರೆ. ಆ ಮೂಲಕ ಅವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ ಸೇತುವೆಯ ಕಾರ್ಯಾಚರಣೆಯನ್ನು ವೀಕ್ಷಿಸಲಿದ್ದಾರೆ. ಇದನ್ನೂ ಓದಿ: ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ
ಪುರಾಣಗಳಲ್ಲಿ ಬೇರೂರಿರುವ ಈ ಸೇತುವೆಯು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ರಾಮೇಶ್ವರಂ ಬಳಿಯ ಧನುಷ್ಕೋಡಿಯಿಂದ ರಾಮಸೇತು ನಿರ್ಮಾಣ ಕಾರ್ಯ ಪ್ರಾರಂಭವಾಯಿತು ಎಂದು ರಾಮಾಯಣದಲ್ಲಿ ಉಲ್ಲೇಖವಾಗಿದೆ.
ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು 550 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ 2.08 ಕಿಲೋಮೀಟರ್. ಇದು 99 ಸ್ಪ್ಯಾನ್‌ಗಳನ್ನು ಮತ್ತು 72.5 ಮೀಟರ್‌ಗಳ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಅನ್ನು ಹೊಂದಿದೆ ಮತ್ತು 17 ಮೀಟರ್ ಎತ್ತರಕ್ಕೆ ಏರುತ್ತದೆ. ಇದು ಹಡಗುಗಳ ಸುಗಮ ಚಲನೆಗೆ ಅನುಕೂಲವಾಗುತ್ತದೆ ಮತ್ತು ರೈಲು ಕಾರ್ಯಾಚರಣೆಯನ್ನು ಅಡೆತಡೆಯಿಲ್ಲದೆ ಖಚಿತಪಡಿಸುತ್ತದೆ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
ಮಧ್ಯಾಹ್ನ 12:45ರ ಸುಮಾರಿಗೆ ಪ್ರಧಾನಿಯವರು ರಾಮೇಶ್ವರದ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1:30ರ ಸುಮಾರಿಗೆ ರಾಮೇಶ್ವರಂನಲ್ಲಿ 8,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.