ಉಡುಪಿ: ಇಂದು ಕೃಷ್ಣನಗರಿ ಉಡುಪಿಗೆ (Udupi) ಪ್ರಧಾನಿ ಮೋದಿ (PM Modi) ಆಗಮಿಸಲಿದ್ದು, ಕೃಷ್ಣ ಮಠದ ಪಕ್ಕದಲ್ಲಿರುವ ಗೀತಾ ಮಂದಿರದಲ್ಲಿ ಭಗವದ್ಗೀತೆ ಧ್ಯಾನ ಮಂದಿರ ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ಕೃಷ್ಣನೂರು ಉಡುಪಿ ಸಜ್ಜಾಗಿದೆ. ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಆಗಮಿಸಿ, ಐತಿಹಾಸಿಕ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕೃಷ್ಣ ಮಠದ ಪಕ್ಕದಲ್ಲಿರುವ ಗೀತಾ ಮಂದಿರದ ಮೊದಲ ಮಹಡಿಯಲ್ಲಿ ಭಗವದ್ಗೀತೆ ಧ್ಯಾನ ಮಂದಿರ ಉದ್ಘಾಟಿಸಿ, ನೂತನವಾಗಿ ನಿರ್ಮಿಸಿದ ಅನಂತಪದ್ಮನಾಭ ದೇವರ ಮೂರ್ತಿಯನ್ನು ಮೋದಿ ಅನಾವರಣ ಮಾಡಲಿದ್ದಾರೆ. ಬಳಿಕ ಮೂರ್ತಿ ಮುಂದೆ ಕುಳಿತು ಧ್ಯಾನ ಮಾಡಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠ ಮಾಹಿತಿ ನೀಡಿದೆ.ಇದನ್ನೂ ಓದಿ: ಉಡುಪಿ ಕಾರ್ಯಕ್ರಮಕ್ಕೆ ಭಾಗವಹಿಸುವ ಅವಕಾಶ ಸಿಕ್ಕಿದ್ದು ಗೌರವದ ವಿಷಯ: ಮೋದಿ
ವಿಶೇಷ ವಿಮಾನದಲ್ಲಿ ಬೆಳಗ್ಗೆ ಮಂಗಳೂರಿಗೆ ಬಂದಿಳಿಯಲಿರುವ ಪ್ರಧಾನಿ ಮೋದಿ, ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಆಗಮಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆ 60 ಲಕ್ಷ ರೂ. ವೆಚ್ಚದಲ್ಲಿ ಹೊಸ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಬೆಳಗ್ಗೆ 11ಕ್ಕೆ ರಥಬೀದಿ ಮೂಲಕ ಆಗಮಿಸುವ ಪ್ರಧಾನಿ ಮೋದಿ ಮೊದಲು ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ಬಳಿಕ ಸುವರ್ಣ ಕನಕನ ಕಿಂಡಿ ಉದ್ಘಾಟಿಸಿ, ಕನಕದಾಸರ ಗುಡಿ ದರ್ಶನ ಮಾಡುತ್ತಾರೆ. ಮಠದೊಳಗೆ ಬಂದು ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆಗೈದು ಶ್ರೀಕೃಷ್ಣನ ದರ್ಶನ ಮಾಡುತ್ತಾರೆ. ಚಿನ್ನದ ತೀರ್ಥ ಮಂಟಪವನ್ನು ಉದ್ಘಾಟಿಸಿ, ಅಷ್ಟಮಠಾಧೀಶರನ್ನು ಭೇಟಿ ಮಾಡಿ, ಪ್ರಸಾದ ಸ್ವೀಕರಿಸಿ ಗೀತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎರಡು ಕಿಲೋಮೀಟರ್‌ವರೆಗೆ ರಸ್ತೆಯಲ್ಲಿ ಬಾಂಬ್ ಸ್ಕ್ಯಾಡ್ ಗಸ್ತು ನಿಯೋಜಿಸಲಾಗಿದೆ. ಹೆಲಿಪ್ಯಾಡ್ ವಠಾರ, ಶ್ರೀಕೃಷ್ಣ ಮಠ ವಠಾರ, ಪ್ರವಾಸಿ ಮಂದಿರದ ಸುತ್ತಮುತ್ತ ಅಂಗಡಿ ಮುಂಗಟ್ಟು ಮುಚ್ಚಲು ಸೂಚಿಸಲಾಗಿದೆ. ಅಲ್ಲದೇ ಪ್ರಧಾನಿ ಮೋದಿ ಸಂಚರಿಸುವ ಮಾರ್ಗದ ಅಂಗಡಿ ಮುಂಗಟ್ಟು ಮುಚ್ಚಲು ಸೂಚನೆ ನೀಡಲಾಗಿದೆ. ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದ್ದು, ಉಡುಪಿಯನ್ನು ನೋ ಫ್ಲೈ ಝೋನ್ ಎಂದು ಆದೇಶ ಮಾಡಲಾಗಿದೆ.ಇದನ್ನೂ ಓದಿ: ಉಡುಪಿ | ಮೋದಿ ಬರುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್; ಡ್ರೋನ್ ಹಾರಾಟ ನಿಷೇಧ

