ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಆಗಮಿಸಿದ್ದು, 15 ವರ್ಷಗಳ ಬಳಿಕ ಇಸ್ರೇಲ್ ಪ್ರಧಾನಿಯೊಬ್ಬರು ಭಾರತಕ್ಕೆ ಆಗಮಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಶಿಷ್ಟಾಚಾರ ಬದಿಗಿರಿಸಿ ವಿಮಾನ ನಿಲ್ದಾಣಕ್ಕೆ ತೆರಳಿ ಬೆಂಜಮಿನ್ ಅವರಿಗೆ ಸ್ವಾಗತ ಕೋರಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಮೋದಿ ಅವರು, ನನ್ನ ಆತ್ಮೀಯ ಗೆಳೆಯನಿಗೆ ಭಾರತಕ್ಕೆ ಸ್ವಾಗತ, ನಿಮ್ಮ ಭೇಟಿ ಐತಿಹಾಸಿಕವಾದದ್ದು, ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Advertisement
Advertisement
ಇಸ್ರೇಲ್ ಗೆ ಪ್ರಧಾನಿ ನರೇಂದ್ರ ಮೋದಿ ಜುಲೈ ನಲ್ಲಿ ಭೇಟಿ ನೀಡಿದ್ದಾಗ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಹ ಶಿಷ್ಟಾಚಾರ ಬದಿಗಿರಿಸಿ ನಮ್ಮ ಪ್ರಧಾನಿಯನ್ನು ಟೆಲ್ ಅವೀವ್ ವಿಮಾನ ನಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಧರ್ಮ ಗುರು ಪೋಪ್ ಅವರಿಗೆ ಈ ಸ್ವಾಗ ನೀಡಿದ್ದರು. ಇಸ್ರೇಲ್ ಪ್ರಧಾನಿಯಿಂದ ಈ ವಿಶೇಷ ಸ್ವಾಗತ ಪಡೆದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದರು.
Advertisement
ಆರು ದಿನಗಳ ಭಾರತದ ಭೇಟಿಗೆ ಆಗಮಿಸುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಅವರಿಗೆ ಪ್ರಧಾನಿ ಮೋದಿ ರಾತ್ರಿ ಔತಣ ಕೂಟ ಏರ್ಪಡಿಸಿದ್ದಾರೆ. ಅಲ್ಲದೇ ಇಸ್ರೇಲ್ ಪ್ರಧಾನಿ ತಾಜ್ ಮಹಲ್ ಗೂ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಇಸ್ರೇಲ್ ಪ್ರಧಾನಿ ಬೆಂಜಮಿನ್ ಭಾರತಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಷ್ಟ್ರಪತಿ ಭವನದ ಮುಂದೆ ಅಧಿಕೃತ ಸ್ವಾಗತ ಕಾರ್ಯಕ್ರಮ ನಡೆಯಿತು. ನಂತರ ಅವರು ತೀನ್ ಮೂರ್ತಿ ಸ್ಮಾರಕಕ್ಕೆ ಭೇಟಿ ನೀಡಿದರು. 100 ವರ್ಷಗಳ ಹಿಂದೆ ಭಾರತದ ಮೂರು ರೆಜಿಮೆಂಟ್ ಗಳು ಹೈಫಾ ಯುದ್ಧದಲ್ಲಿ ಭಾಗವಹಿಸಿದ್ದ ಸ್ಮರಣೆಗಾಗಿ ಈ ಸ್ಮಾರಕ ನಿರ್ಮಿಸಲಾಗಿದೆ. ಅಲ್ಲದೇ ಈ ವೇಳೆ ತೀನ್ ಮೂರ್ತಿ ಮಾರ್ಗ್ ಚೌಕಕ್ಕೆ ತೀನ್ ಮೂರ್ತಿ ಹೈಫಾ ಚೌಕ್ ಎಂದು ಮರುನಾಮಕರಣ ಮಾಡಲಾಯಿತು. ಇದನ್ನೂ ಓದಿ: ಟ್ರಂಪ್, ಪೋಪ್ ಬಳಿಕ ಇಸ್ರೇಲಿನಲ್ಲಿ ಮೋದಿಗೆ ಸಿಕ್ತು ‘ಆ’ ವಿಶೇಷ ಸ್ವಾಗತ: ವಿಡಿಯೋ ನೋಡಿ
ಈ ಸ್ಮಾರಕದಲ್ಲಿ ಸ್ಥಾಪನೆ ಮಾಡಲಾಗಿರುವ ಮೂರು ಕಂಚಿನ ಪ್ರತಿಮೆಗಳು ಮೈಸೂರು, ಹೈದರಾಬಾದ್ ಮತ್ತು ಜೋಧ್ಪುರ್ ಪಡೆಗಳನ್ನು ಪ್ರತಿನಿಧಿಸುತ್ತವೆ. ಮೊದಲ ವಿಶ್ವ ಯುದ್ಧ ಸಮಯದಲ್ಲಿ ಇಸ್ರೇಲ್ ನ ಹೈಫಾ ನಗರವನ್ನು 1918, ಸೆಪ್ಟೆಂಬರ್ 23 ಬ್ರಿಟಿಷ್ ಒಕ್ಕೂಟ ಸೈನ್ಯ ಜಯಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೈನಿಕರ ತೋರಿದ ಸಾಧನೆಯ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಹೈಫಾ ನಗರವನ್ನು ವಿಮೋಚನೆ ಮಾಡುವ ಸಮರದಲ್ಲಿ ಭಾರತದ 44 ಸೈನಿಕರು ತಮ್ಮ ಜೀವವನ್ನು ತ್ಯಾಗ ಮಾಡಿದ್ದರು.
ಪ್ರಧಾನಿ ಮೋದಿ ಶಿಷ್ಟಾಚಾರ ಉಲ್ಲಂಘಿಸುವುದು ಇದೇ ಮೊದಲೆನಲ್ಲ. ಈ ಹಿಂದೆ 2015ರ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಆಗಮಿಸಿದ್ದ ವೇಳೆ ಮೋದಿ ವಿಮಾನ ನಿಲ್ದಾಣಕ್ಕೆ ಹೋಗಿ ಅವರನ್ನು ಸ್ವಾಗತಿಸಿದ್ದರು. ಇದಾದ ಬಳಿಕ ಬುಲೆಟ್ ರೈಲು ಯೋಜನೆ ಶಂಕುಸ್ಥಾಪನೆಗೆ ಆಗಮಿಸಿದ್ದ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರನ್ನು 2017ರ ಸೆಪ್ಟೆಂಬರ್ ನಲ್ಲಿ ಮೋದಿ ಗುಜರಾತ್ ನ ಅಹಮದಬಾದ್ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಕೋರಿದ್ದರು.
ಭಾರತಕ್ಕೆ ಭೇಟಿ ನೀಡುತ್ತಿರುವ ಎರಡನೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಗಿದ್ದು, ಈ ಹಿಂದೆ 2003ರಲ್ಲಿ ಏರಿಯಲ್ ಶರೋನ್ ಭಾರತ ಪ್ರವಾಸ ಕೈಗೊಂಡಿದ್ದರು.
ברוך הבא להודו, חברי ראש הממשלה נתניהו! ביקורך בהודו הוא היסטורי ומיוחד. ביקור זה יחזק את הקשרים הקרובים בין המדינות שלנו. pic.twitter.com/h3Jmes5SxB
— Narendra Modi (@narendramodi) January 14, 2018