`ಕುಂಭರಾಮ್’ ಬದ್ಲು `ಕುಂಭಕರ್ಣ’ ಎಂದ ರಾಹುಲ್ – ಹೆಸರು ಹೇಳಲಾಗದವ್ರು ಅಧಿಕಾರಕ್ಕೆ ಬಂದು ಏನು ಮಾಡ್ತಾರೆ ಮೋದಿ ಟಾಂಗ್

Public TV
2 Min Read
RAHUL GANDI MODI

ಜೈಪುರ: ರಾಜಸ್ಥಾನ ಸೇರಿದಂತೆ ತೆಲಂಗಾಣ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಇಂದು ಅಂತಿಮ ದಿನವಾಗಿದ್ದು, ಪ್ರಧಾನಿ ಮೋದಿ ರಾಹುಲ್ ಗಾಂಧಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ರಾಜಸ್ಥಾನದ ಪಾಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಪ್ರಮುಖ ಮುಖಂಡರ ಹೆಸರು ಹೇಳಲುಬಾರದ ನಾಯಕರು ಅಧಿಕಾರಕ್ಕೆ ಬಂದು ಏನು ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

Capture

ರಾಜಸ್ಥಾನ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ ಹಾಗೂ ಜಾಟ್ ಸಮುದಾಯದ ಪ್ರಮುಖ ನಾಯಕರಾಗಿದ್ದ `ಕುಂಭರಾಮ್’ ಅವರ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಏತ ನೀರಾವರಿ ಯೋಜನೆ ಬಗ್ಗೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಆ ವೇಳೆ ಕುಂಭರಾಮ್ ಬದಲಾಗಿ ಕುಂಭಕರ್ಣ ಎಂದು ಹೇಳಿ ನಗೆಪಾಟಲಿಗೀಡಾಗಿದ್ದರು. ಈ ವಿಡಿಯೋವನ್ನು ಬಿಜೆಪಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಹುಲ್‍ರ ತಪ್ಪನ್ನೇ ಪ್ರಮುಖ ಆಸ್ತ್ರವಾಗಿ ಪ್ರಯೋಗಿಸಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ನಾಯಕನಿಗೆ ರೈತ ನಾಯಕ ಮತ್ತು ಜಾಟ್ ಸಮುದಾಯದ ಮುಖಂಡರ ಹೆಸರೇ ಗೊತ್ತಿಲ್ಲ. ಹೀಗಿರುವ ಇವರು ಅಧಿಕಾರಕ್ಕೆ ಬಂದು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕುಂಭಕರ್ಣ ಹೇಗೆ ತಮ್ಮ ದೀರ್ಘ ನಿದ್ದೆಗೆ ಖ್ಯಾತಿ ಪಡೆದಿದ್ದರೋ ಅಂತೆಯೇ 60 ವರ್ಷ ದೇಶದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷ ನಿದ್ದೆಯಲ್ಲಿತ್ತು ಎಂದು ಟೀಕಿಸಿದ್ದಾರೆ.

ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪ ಮಾಡದೆ ವಾಗ್ದಾಳಿ ನಡೆಸಿದ ಮೋದಿ, ಭ್ರಷ್ಟಾಚಾರದ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಇರುವ ಜನರಿಗೆ ರಾಜಸ್ಥಾನದ ಅಧಿಕಾರ ನೀಡುವುದು ಬೇಡ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ  ಎಂದು ಜನರಲ್ಲಿ ಮನವಿ ಮಾಡಿದರು.

ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಇಚ್ಛಿಸಿರುವ ಬಿಜೆಪಿ ಮುಖಂಡರು ಮತ್ತೆ ಸಿಎಂ ವಸುಂಧರಾ ರಾಜೆ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಡಿಸೆಂಬರ್ 7 ರಂದು ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಚುನಾವಣೆಯ ಮತದಾನ ನಡೆಯಲಿದೆ.

ಅಂದಹಾಗೇ 1914 ರಲ್ಲಿ ಪಟಿಯಲಾದಲ್ಲಿ ಜನಿಸಿದ ಚೌಧರಿ ಕುಂಭರಾಮ್ ಆರ್ಯ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಅಲ್ಲದೇ ರೈತರ ಪರ ಹೋರಾಟಗಳನ್ನು ನಡೆಸಿ ರೈತ ನಾಯಕರಾಗಿದ್ದರು. ಇವರಿಗೆ ರಾಜಸ್ಥಾನದಲ್ಲಿ ಹೆಚ್ಚಿನ ಅಭಿಮಾನಿಗಳು ಇದ್ದು, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, 1995 ರಲ್ಲಿ ಮೃತಪಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *