ಮೈಸೂರು: ಪ್ರಧಾನಿ ನರೇಂದ್ರ ಮೋದಿಗೆ ನನ್ನ ಕಂಡರೆ ಭಯ. ಅದಕ್ಕೆ ಬಂದಾಗಲೆಲ್ಲ ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ಮೋದಿ ಕರ್ನಾಟಕ ಭೇಟಿ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ನನ್ನ ಕಂಡರೆ ಭಯ ಇದೆ. ನಾನು ವೀಕ್ ಇದ್ದಿದ್ದರೆ ಪದೇ ಪದೇ ನನ್ನ ಮೇಲೆ ಯಾಕೆ ವಾಗ್ದಾಳಿ ಮಾಡುತ್ತಿದ್ದರು. ಈಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಎಲ್ಲರೂ ಒಂದಾಗಿ ನನ್ನ ವಿರುದ್ಧ ತೊಡೆ ತಟ್ಟಿದ್ದಾರೆ. ಅವರೆಲ್ಲರಿಗೂ ನನ್ನ ಕಂಡರೆ ಭಯ ಇದೆ. ಸಿದ್ದರಾಮಯ್ಯ ಎಂದರೆ ಜೆಡಿಎಸ್, ಬಿಜೆಪಿ ಎಲ್ಲರಿಗೂ ಭಯ ಆರಂಭವಾಗಿದೆ. ರಾಜ್ಯದ ಜನ ಸಿದ್ದರಾಮಯ್ಯ ಪರ ಇದ್ದಾರೆ ಅನ್ನೋ ಭಯ ಇದೆ ಎಂದು ಹೇಳಿದರು.
ಬಿಜೆಪಿಯದ್ದು ಮಿಷನ್, ಕಾಂಗ್ರೆಸ್ ನದ್ದು ವಿಷನ್. ಬಿಜೆಪಿಯವರ ಮಿಷನ್ 150 ಈಗ 50ಕ್ಕೆ ಇಳಿದಿದೆ. ಚುನಾವಣೆ ವೇಳೆಗೆ ಅವರ ಮಿಷನ್ ಸಂಖ್ಯೆ ಇನ್ನೆಷ್ಟಕ್ಕೆ ಬರಲಿದೆಯೋ ಗೊತ್ತಿಲ್ಲ. ಅವರ ಮಿಷನ್ ವ್ಯಾಪ್ತಿ ಕಡಿಮೆ ಆಗಿದೆ ಎಂದರು.
ಕಾಂಗ್ರೆಸ್ ಆಡಳಿತ ಸಹಿಸಿಕೊಳ್ಳಲು ಕರ್ನಾಟಕ ಸಿದ್ಧವಿಲ್ಲ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸಹಿಸಿಕೊಂಡಿದ್ದಕ್ಕೆ ನಂಜನಗೂಡಿನಲ್ಲಿ ಜನ ಕಾಂಗ್ರೆಸ್ ಗೆಲ್ಲಿಸಿದ್ದು. ಜನ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೇಕು ಎಂದು ಬಯಸ್ತಿದ್ದಾರೆ. ಬಿಜೆಪಿಯವರು ಮಿಷನ್ 150 ಬಯಸಿದರೆ ಆಗಲ್ಲ. ಜನರು ಬಯಸಿದರೆ ಮಾತ್ರ ಸರ್ಕಾರ ಅಧಿಕಾರಕ್ಕೆ ಬರುವುದು ಸಾಧ್ಯ ಎಂದರು. ಬಿಜೆಪಿಯವರಷ್ಟು ಡರ್ಟಿ ಪಾಲಿಟಿಕ್ಸ್ ಮಾಡೋರು ಈ ದೇಶದಲ್ಲೇ ಇಲ್ಲ. ಬಿಜೆಪಿ ರಾಜಕಾರಣಿಗಳು ಕೊಳಕು ಮನಸ್ಥಿತಿ ಉಳ್ಳವರು. ಅವರಿಗೆ ರಾಜ್ಯದ ಕಾಂಗ್ರೆಸ್ ಆಡಳಿತವನ್ನ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಈ ಕಾರಣಕ್ಕಾಗಿ ಸುಖಾಸುಮ್ಮನೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಬಿಜೆಪಿಯವರಿಗೆ ಸುಳ್ಳು ಹೇಳೋದು ಬಿಟ್ಟು ಬೇರೆ ಗೊತ್ತಿಲ್ಲ. ಆ ಮುರಳೀಧರ ರಾವ್ ಆಂಧ್ರದಿಂದ ಬಂದಿರೋದೆ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡೋಕೆ. ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪಗೆ ಏನೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.