ನವದೆಹಲಿ: ಮಕರ ಸಂಕ್ರಾಂತಿ (Makara Sankranti) ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ನಿವಾಸದಲ್ಲಿ ಪುಂಗನೂರು (Punganur) ಹಸುಗಳಿಗೆ ಆಹಾರ ನೀಡಿದ್ದಾರೆ.
ಮನೆಯ ಹೊರಗಿನ ಆವರಣದಲ್ಲಿರುವ ಹುಲ್ಲು ಹಾಸಿನ ಮೇಲೆ ನಿಂತು ಹಬ್ಬದ ಸಂಪ್ರದಾಯದಂತೆ ಬಟ್ಟೆಯಿಂದ ಅಲಂಕಾರಗೊಂಡಿದ್ದ ಹಸುಗಳಿಗೆ ಹಸಿರು ಹುಲ್ಲನ್ನು ನೀಡುತ್ತಿರುವ ವಿಡಿಯೋವನ್ನು ಪ್ರಧಾನಿ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ.
ಪುಂಗನೂರು ತಳಿಯ ವಿಶೇಷ ಏನು?
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೂಲದ ಪುಂಗನೂರು ವಿಶ್ವದ ಅತ್ಯಂತ ಚಿಕ್ಕ ಹಸು ತಳಿ ಎಂದು ಪ್ರಖ್ಯಾತಿ ಪಡೆದಿದೆ. ಪುಂಗನೂರು ಹಸುಗಳು 15 ನೇ ಶತಮಾನದಲ್ಲಿ ವಿಜಯನಗರ ರಾಜರು ಈ ಪ್ರದೇಶಕ್ಕೆ ತಂದ ಓಂಗೋಲ್ ಜಾನುವಾರುಗಳಿಂದ ಬಂದಿವೆ ಎಂದು ನಂಬಲಾಗಿದೆ. 2.5 ಅಡಿ ಎತ್ತರ ಮತ್ತು ಸಾಧಾರಣ 115-200 ಕೆಜಿ ತೂಕ ಹೊಂದಿರುತ್ತದೆ. ಅಗಲವಾದ ಹಣೆ, ಸಣ್ಣ ಕಾಲುಗಳು ಹೊಂದಿರುವುದು ಇದರ ವೈಶಿಷ್ಟ್ಯ. ಇದನ್ನೂ ಓದಿ: ದೇಶದ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯ ತಿಳಿಸಿದ ಮೋದಿ
10-15 ಸೆಂ.ಮೀ ಉದ್ದದ ಸಣ್ಣ, ಅರ್ಧಚಂದ್ರಾಕಾರದ ಕೊಂಬುಗಳನ್ನು ಇವು ಹೊಂದಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಪುಂಗನೂರು ತಳಿಯ ಹಸುಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸೌಮ್ಯ ಮತ್ತು ಸ್ನೇಹಪರ ಸ್ವಭಾವವನ್ನು ಹೊಂದಿದೆ. ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

