ನವದೆಹಲಿ: `ಇಂಡಿಯಾ ದ ಮೋದಿ ಕ್ವೆಶ್ಚನ್’ (India: The Modi Question) ಸಾಕ್ಷ್ಯಚಿತ್ರದ ವಿರುದ್ಧ ದಾಖಲಾದ 10 ಸಾವಿರ ಕೋಟಿ ರೂ. ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ (Delhi High Court) ಸೋಮವಾರ ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಂಪನಿಗೆ (BBC) ಸಮನ್ಸ್ ಜಾರಿ ಮಾಡಿದೆ.
ಸಾಕ್ಷ್ಯಚಿತ್ರವು ಭಾರತ, ಅದರ ನ್ಯಾಯಾಂಗ ಮತ್ತು ಸ್ವತಃ ಪ್ರಧಾನಿಯ ಪ್ರತಿಷ್ಠೆಗೆ ಅಗೌರವ ತಂದಿದೆ ಎಂದು ಗುಜರಾತ್ (Gujarat) ಮೂಲದ ಜಸ್ಟಿಸ್ ಆನ್ ಟ್ರಯಲ್ (Justice on Trial) ಸಂಸ್ಥೆ ಆರೋಪಿಸಿದೆ. ಅಲ್ಲದೆ ಅದು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್‍ನಲ್ಲಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್
ಸಾಕ್ಷ್ಯಚಿತ್ರವು ಮಾನಹಾನಿಕರ ವಿಷಯಗಳನ್ನು ಒಳಗೊಂಡಿದೆ. ದೇಶ, ನ್ಯಾಯಾಂಗದ ಪ್ರತಿಷ್ಠೆಯ ಮೇಲೆ ಮತ್ತು ಭಾರತದ ಪ್ರಧಾನ ಮಂತ್ರಿಯ ವಿರುದ್ಧ ಪ್ರಚೋದನೆ ನೀಡುವಂತಹ ಅಂಶಗಳನ್ನು ಒಳಗೊಂಡಿವೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಈ ಹಿಂದೆ ಬಿಜೆಪಿ (BJP) ನಾಯಕ ಬಿನಯ್ ಕುಮಾರ್ ಸಿಂಗ್ ಅವರು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ಕುರಿತು ದೆಹಲಿಯ ಜಿಲ್ಲಾ ನ್ಯಾಯಾಲಯವು ಬಿಬಿಸಿಗೆ ಸಮನ್ಸ್ ಜಾರಿ ಮಾಡಿತ್ತು. ಭಾರತ ಸರ್ಕಾರವು ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಆದರೆ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಲು ವಿಕಿಪೀಡಿಯಾ ಲಿಂಕ್‍ಗಳನ್ನು ಒದಗಿಸುತ್ತಿದೆ. ಇಂಟರ್ನೆಟ್ ಆರ್ಕೈವ್‍ನಲ್ಲಿ ಇನ್ನೂ ಲಭ್ಯವಿದೆ ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಆರ್‍ಎಸ್‍ಎಸ್ (RSS) ಮತ್ತು ವಿಎಚ್‍ಪಿ (VHP) ವಿರುದ್ಧ ಸಾಕ್ಷ್ಯಚಿತ್ರ ಅಥವಾ ಇತರ ಯಾವುದೇ ವಿಷಯವನ್ನು ಪ್ರಕಟಿಸದಂತೆ ತಡೆಯಲು ಬಿಬಿಸಿ, ವಿಕಿಮೀಡಿಯಾ ಮತ್ತು ಇಂಟರ್ನೆಟ್ ಆರ್ಕೈವ್ ವಿರುದ್ಧ ತಡೆಯಾಜ್ಞೆ ನೀಡುವಂತೆ ಸಿಂಗ್ ಕೋರಿದ್ದರು. ಆ ಅರ್ಜಿಯ ವಿಚಾರಣೆ ಮೇ 26ರಂದು ನಡೆಸಲಿದೆ. ಇದನ್ನೂ ಓದಿ: ನೂತನ ಸರ್ಕಾರದಲ್ಲಿ ಸುಪ್ರೀಂಕೋರ್ಟ್ ವಕೀಲ ಸಂಕೇತ್ ಏಣಗಿಗೆ ಒಲಿಯಲಿದ್ಯಾ ಅಡ್ವೊಕೇಟ್ ಜನರಲ್ ಹುದ್ದೆ?