ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿ ಏಮ್ಸ್ ಗೆ ತೆರಳಿ ಮೋದಿಯಿಂದ ವಾಜಪೇಯಿ ಭೇಟಿ

Public TV
1 Min Read
modi meets wajapayee

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದಾರೆ.

ಮೋದಿ ಭಾನುವಾರ ರಾತ್ರಿ 9.05ಕ್ಕೆ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯವನ್ನು ವಿಚಾರಿಸಿ 9.25ಕ್ಕೆ ತೆರಳಿದ್ದಾರೆ.

ಸಾಧಾರಣವಾಗಿ ಪ್ರಧಾನಿ ಭೇಟಿ ವಿಚಾರವನ್ನು ಮುಂಚಿತವಾಗಿ ತಿಳಿಸಲಾಗುತ್ತದೆ. ಆದರೆ ಭಾನುವಾರ ಪ್ರಧಾನಿ ಭೇಟಿ ನೀಡುತ್ತಿದ್ದ ವಿಚಾರ ಏಮ್ಸ್ ವೈದ್ಯರಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಯಾವುದೇ ಭದ್ರತಾ ಸಿಬ್ಬಂದಿಯೂ ಅವರ ಜೊತೆ ಇರಲಿಲ್ಲ ಎಂದು ವಾಹಿನಿಯೊಂದು ವರದಿ ಮಾಡಿದೆ.

ಮೋದಿ ಭೇಟಿ ನೀಡಿ ತೆರಳಿದ ನಂತರ ಏಮ್ಸ್ ಆಡಳಿತಕ್ಕೆ ಪ್ರಧಾನಿ ಆಗಮಿಸಿದ ವಿಚಾರ ಗೊತ್ತಾಗಿದೆ. 7 ಲೋಕಮಾನ್ಯ ತಿಲಕ್ ರಸ್ತೆಯ ಮೂಲಕ ಏಮ್ಸ್ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಸಂಚಾರ ನಿಯಮನ್ನು ಮೋದಿ ಪಾಲಿಸಿದ್ದರು. ಎಲ್ಲ ಟ್ರಾಫಿಕ್ ಸಿಗ್ನಲ್ ನಲ್ಲಿ ಕಾರು ನಿಂತುಕೊಂಡಿತ್ತು ಎಂದು ವರದಿಯಾಗಿದೆ.

ವಾಜಪೇಯಿಯವರು ಮೂತ್ರನಾಳದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಶೀಘ್ರವೇ ಗುಣಮುಖರಾಗಲಿದ್ದಾರೆ. ಸೋಂಕು ಗುಣಮುಕ್ತವಾಗುವವರೆಗೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಯಲಿದೆ ಎಂದು ಏಮ್ಸ್ ಈ ಹಿಂದೆ ತಿಳಿಸಿತ್ತು. ಜೂನ್ 11 ರಂದು ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

Share This Article