ಆಮ್ಸ್ಟರ್‌ಡ್ಯಾಮ್: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ನಡುವೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಭಾಗವಾಗಿ ಅವರು ಶುಕ್ರವಾರ ನೆದರ್ಲೆಂಡ್ಸ್ (Netherlands) ಭೇಟಿ ನೀಡಿದ್ದಾರೆ.
ಈ ವೇಳೆ ಮೋದಿಯವರು ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸುವ ಕುರಿತು ನೆದರ್ಲೆಂಡ್‌ನ ಪ್ರಧಾನಿ ರಾಬ್ ಜೆಟ್ಟನ್ ಅವರೊಂದಿಗೆ ಚರ್ಚಿಸಿದ್ದಾರೆ. ವ್ಯಾಪಾರ, ತಂತ್ರಜ್ಞಾನ, ರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನದ ವಿಷಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು ಪರಿಹಾರಕ್ಕೆ ಭಾರತವೇ ಸೂಕ್ತ: ರಷ್ಯಾ ವಿದೇಶಾಂಗ ಸಚಿವ
ಮೇ 15 ರಿಂದ 17 ರವರೆಗಿನ ಮೋದಿಯವರ ಈ ಯುರೋಪ್ ರಾಷ್ಟ್ರಗಳ ಭೇಟಿ 2017ರ ನಂತರ ಎರಡನೇ ಭೇಟಿಯಾಗಿದೆ. ಈ ಭೇಟಿಯನ್ನು ಅಧಿಕಾರಿಗಳು ಭಾರತ ಹಾಗೂ ನೆದರ್ಲೆಂಡ್ಸ್ ನಡುವಿನ ದ್ವಿಪಕ್ಷೀಯ ಸಂಬಂಧದ ಮಹತ್ವದ ಘಟ್ಟ ಎಂದು ಬಣ್ಣಿಸಿದ್ದಾರೆ.
ಮೋದಿ ಭೇಟಿ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯವು, ಈ ಭೇಟಿ ಮಹತ್ವದ ಕಾರ್ಯಸೂಚಿ ಹೊಂದಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಉಭಯ ದೇಶಗಳ ನಡುವಿನ ಪಾಲುದಾರಿಕೆ ಹಾಗೂ ಕಾರ್ಯತಂತ್ರದ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ನೆದರ್ಲಾಂಡ್ಸ್ ನಡುವೆ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ, ಹೂಡಿಕೆ ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ, ಭದ್ರತೆ, ಅರೆವಾಹಕಗಳು, ನವೀಕರಿಸಬಹುದಾದ ಇಂಧನ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಹೆಚ್ಚು ಬೆಳೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯುಎಇಯಲ್ಲಿ ಪ್ರಧಾನಿ ಮೋದಿ: ಎಲ್‌ಪಿಜಿ, ರಕ್ಷಣಾ, ತೈಲ ನಿಕ್ಷೇಪ ಒಪ್ಪಂದಗಳಿಗೆ ಭಾರತ ಸಹಿ
2024-25ರಲ್ಲಿ ದ್ವಿಪಕ್ಷೀಯ ವ್ಯಾಪಾರದ ಒಟ್ಟು ಮೌಲ್ಯ 27.8 ಶತಕೋಟಿ ಡಾಲರ್ ಆಗಿದ್ದು, ಯುರೋಪ್ ರಾಷ್ಟçಗಳಲ್ಲಿ ನೆದರ್ಲೆಂಡ್ಸ್ ಭಾರತದ ಅತಿದೊಡ್ಡ ಪಾಲುದಾರಿಕೆ ಹೊಂದಿರುವ ದೇಶವಾಗಿದೆ. ಹೂಡಿಕೆಯಲ್ಲೂ ಕೂಡ ನೆದರ್ಲೆಂಡ್ಸ್ ಭಾರತದ ನಾಲ್ಕನೇ ಅತಿದೊಡ್ಡ ಹೂಡಿಕೆದಾರನಾಗಿದ್ದು, ಒಟ್ಟು ವಿದೇಶಿ ನೇರ ಹೂಡಿಕೆ 55.6 ಶತಕೋಟಿ ಡಾಲರ್‌ಗೆ ತಲುಪಿದೆ ಎಂದಿದ್ದಾರೆ.
