ಜೈಪುರ: ನೋಟು ಬದಲಾವಣೆಗೆ ಅವಧಿ ಮೀರಿದ ಬಳಿಕವೂ ಹಳೆಯ ನೋಟು ಹೊಂದಿದ್ದ ಅನಾಥರಿಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಿದ್ದಾರೆ.
ರಾಜಸ್ಥಾನದ ಕೋಟಾದ 17 ವರ್ಷದ ಸೂರಜ್ ಬಂಜಾರಾ ಮತ್ತು ಆತನ ಸಹೋದರಿ ಸಲೋನಿಗೆ 96 ಸಾವಿರ ರೂಪಾಯಿ ಮೊತ್ತದ ಹಳೆಯ ನೋಟು ಸಿಕ್ಕಿತ್ತು. ಆದ್ರೆ ಅಷ್ಟೊತ್ತಿಗೆ ನೋಟು ವಿನಿಮಯಕ್ಕೆ ನೀಡಲಾಗಿದ್ದ ಅವಧಿ ಕೂಡಾ ಮುಗಿದುಹೋಗಿತ್ತು. ಇದರಿಂದ ಏನ್ ಮಾಡೋದು ಅಂತಾ ಗೊತ್ತಾಗದೇ ಇಬ್ಬರೂ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಈ ಮಕ್ಕಳಿಗೆ 50 ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ವಿಮೆ ಪಾಲಿಸಿಯನ್ನೂ ಮಾಡಿಸಿದ್ದಾರೆ. ಈ ಎರಡೂ ಪಾಲಿಸಿಗಳಿಗಾಗಿ ಐದು ವರ್ಷದ ಮಟ್ಟಿಗೆ 1,170 ರೂಪಾಯಿಯ ಇನ್ಶೂರೆನ್ಸ್ ಪ್ರೀಮಿಯಮ್ ಹಣವನ್ನು ಬಿಡುಗಡೆ ಮಾಡಿಸಿದ್ದಾರೆ.
Advertisement
ಬಿಡುಗಡೆ ಮಾಡಲಾಗಿರುವ ಹಣ ಹಾಗೂ ವಿಮೆಯ ಪ್ರೀಮಿಯಮ್ ಹಣ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಕಾಗದಿದ್ದರೂ, ಈ ನೆರವಿನಿಂದ ನಿಮ್ಮ ಕಷ್ಟಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು ಎಂದು ನಂಬಿದ್ದೇನೆ. ಪತ್ರದ ಮೂಲಕ ನಿಮ್ಮ ಈಗಿನ ಪರಿಸ್ಥಿತಿ ಬಗ್ಗೆ ತಿಳಿದು ನನಗೆ ದುಃಖವಾಗಿದೆ ಎಂದು ಮೋದಿ ಈ ಮಕ್ಕಳಿಗೆ ಪತ್ರದಲ್ಲಿ ಹೇಳಿದ್ದಾರೆ.
Advertisement
ಈ ಮಕ್ಕಳು ಸದ್ಯ ಕೋಟಾದ ಮಕ್ಕಳ ರಕ್ಷಣಾ ಗೃಹದಲ್ಲಿದ್ದಾರೆ. ಪ್ರಧಾನಿಯಿಂದ ಬಿಡುಗಡೆಯಾಗಿರುವ ಹಣ ಈಗಾಗಲೇ ಮಕ್ಕಳ ಖಾತೆಗೆ ಸೇರಿದೆ ಎಂದು ಕೋಟಾದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಹರೀಶ್ ಹೇಳಿದ್ದಾರೆ.
Advertisement
ಮಕ್ಕಳಿಗೆ ಅಷ್ಟೊಂದು ಹಣ ಸಿಕ್ಕಿದ್ದು ಹೇಗೆ?: 4 ವರ್ಷಗಳ ಹಿಂದೆ ಈ ಮಕ್ಕಳ ತಾಯಿಯನ್ನು ಕೊಲೆ ಮಾಡಲಾಗಿತ್ತು. ಇವರ ತಂದೆ ಅದಕ್ಕೂ ಮೊದಲೇ ತೀರಿಕೊಂಡಿದ್ದರು. ನಂತರ ಅನಾಥರಾಗಿದ್ದ ಇವರನ್ನ ಮಕ್ಕಳ ರಕ್ಷಣಾ ಗೃಹಕ್ಕೆ ಕರೆತರಲಾಗಿತ್ತು. ಇದೇ ವರ್ಷ ಮಾರ್ಚ್‍ನಲ್ಲಿ ಕೋಟಾ ಮಕ್ಕಳ ಕಲ್ಯಾಣ ಸಮಿತಿ ಮಕ್ಕಳನ್ನ ಅವರ ಸಹರ್‍ವಾಡಾ ಗ್ರಾಮದ ಮನೆಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ಮಕ್ಕಳ ತಾಯಿ ಕೂಡಿಟ್ಟಿದ್ದ ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿತ್ತು. ಮಕ್ಕಳಿಗೆ ಸಿಕ್ಕ ಹಣವನ್ನು ಬದಲಾವಣೆ ಮಾಡಲು ಅವಧಿ ಮೀರಿದ್ದರಿಂದ ಅಧಿಕಾರಿಗಳು ಆರ್‍ಬಿಐ ಮೊರೆ ಹೋಗಿದ್ದರು. ಆದ್ರೆ ಆರ್‍ಬಿಐ ಕೂಡ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಬದಲಾವಣೆ ಮಾಡಿಕೊಡಲು ಅಸಹಾಯಕತೆ ತೋರಿತ್ತು. ನಂತರ ಈ ಮಕ್ಕಳು ಸಹಾಯ ಕೋರಿ ಮೋದಿಗೆ ಪತ್ರ ಬರೆದಿದ್ದರು.