ಚಿತ್ರದುರ್ಗ: ಸಾಮಾನ್ಯವಾಗಿ ಪ್ರೀತಿಸಿದ ಯುವಕ, ಮದುವೆಯಾಗುತ್ತೇನೆ ಎಂದು ನಂಬಿಸಿ ಕೈಕೊಟ್ಟು ಪರಾರಿಯಾಗಿರೋ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಆದರೆ ಇಲ್ಲೊಬ್ಬ ಯುವಕ ಮಾತ್ರ ತಾನು ಪ್ರೀತಿಸಿ ಮದುವೆಯಾದ ಪತ್ನಿಯನ್ನು ಆಕೆಯ ಸಂಬಂಧಿಗಳು ಕಿಡ್ನಾಪ್ ಮಾಡಿದ್ದಾರೆಂದು ಆರೋಪಿಸಿ ಪತ್ನಿ ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ.
ಹೌದು. ಕೋಟೆನಾಡು ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದ ಯುವಕ ಮಾರುತಿ, ನನ್ನ ಪತ್ನಿಯನ್ನು ಪತ್ತೆ ಮಾಡಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ. ಕಳೆದ 7 ವರ್ಷಗಳಿಂದ ಅದೇ ಊರಿನ ಯುವತಿಯನ್ನು ಪ್ರೀತಿಸಿ 2018ರ ಜೂನ್ 18 ರಂದು ಯಾರಿಗೂ ಗೊತ್ತಿಲ್ಲದೆ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಯುವತಿ ಕಡೆಯವರಿಗೂ ಮದುವೆಯಾದ ವಿಷಯ ಗೊತ್ತಾಗಬಾರದು ಎಂಬ ಉದ್ದೇಶದಿಂದ ಇಬ್ಬರೂ ಹಾಗೆಯೇ ಮ್ಯಾನೇಜ್ ಮಾಡಿಕೊಂಡು ಬರುತ್ತಿದ್ದರು.
ಇವರಿಬ್ಬರ ಪ್ರೀತಿ ಬಗ್ಗೆ ಹುಡುಗಿ ಕಡೆಯವರಿಗೆ ತಿಳಿದಾಗ, ಮಾರುತಿಯನ್ನು ಒಂದು ವೇಳೆ ಆಕೆ ಮದುವೆಯಾದರೆ ಇಬ್ಬರನ್ನೂ ಕೊಂದು ಬಿಡುತ್ತೇವೆ. ಅವರ ಮನೆಯವರನ್ನು ಕೂಡ ಸುಮ್ಮನೆ ಬಿಡುವುದಿಲ್ಲ ಎಂದು ಯುವತಿ ಮನೆಯವರು ಜೀವ ಬೆದರಿಕೆ ಹಾಕಿದ್ದರು. ಆದರೆ ಈಗ ದಿಢೀರ್ ತನ್ನ ಪತ್ನಿ ನಾಪತ್ತೆಯಾಗಿದ್ದು, ಆಕೆಯನ್ನು ಗೃಹ ಬಂಧನದಲ್ಲಿ ಇಟ್ಟಿದ್ದಾರೆ ಎಂದು ಪಾಗಲ್ ಪ್ರೇಮಿ ಮಾರುತಿ ಪೊಲೀಸರ ಮೊರೆ ಹೋಗಿದ್ದಾನೆ.
ಇವರ ಪ್ರೇಮ ವಿವಾಹಕ್ಕೆ ಯಾಕಿಷ್ಟು ವಿರೋಧವೆಂದು ವಿಚಾರಿಸಿದ್ರೆ, ಯುವತಿ ಮಡಿವಾಳ ಜನಾಂಗದವರು ಹಾಗೂ ಮಾರುತಿ ಬಜಂತ್ರಿ ಜಾತಿಯವನಾಗಿರುವ ಒಂದೇ ಕಾರಣಕ್ಕೆ ಇವರಿಬ್ಬರನ್ನೂ ಬೇರ್ಪಡಿಸಲು ಯುವತಿ ಮನೆಯವರು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಅನ್ನೋದು ಮಾರುತಿಯ ಸ್ನೇಹಿತರ ಆರೋಪವಾಗಿದೆ. ಅಲ್ಲದೆ ಮಾರುತಿಗೆ ಹಾಗೂ ಅವನ ಕುಟುಂಬಕ್ಕೆ ಪ್ರಾಣ ಬೆದರಿಕೆಯನ್ನು ಹಾಕಿರುವುದು ಕುಟುಂಬದ ಎಲ್ಲರಿಗೂ ಆತಂಕ ಮೂಡಿಸಿದೆ. ಆದ್ದರಿಂದ ಪೊಲೀಸರು ಈಗಾಗಲೇ ವಿವಾಹವಾಗಿರೋ ಯುವ ಪ್ರೇಮಿಗಳಿಗೆ ಮತ್ತು ಮಾರುತಿ ಕುಟುಂಬದವರಿಗೆ ರಕ್ಷಣೆ ಕೊಡಬೇಕೆಂಬ ಆಗ್ರಹ ಕೇಳಿಬಂದಿದೆ.
ಒಟ್ಟಾರೆ ಪ್ರೀತಿಗೆ ಯಾವುದೇ ಜಾತಿ, ಧರ್ಮ ಎನ್ನುವ ಬೇಧ ಭಾವ ಇರುವುದಿಲ್ಲ. ಅದಕ್ಕಾಗಿಯೇ ಪ್ರೇಮಿಗಳು ಜಾತಿ ಅಡ್ಡ ಬಂದ ಕಾರಣಕ್ಕೆ ತಮ್ಮ ಪ್ರೀತಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರೋ ಎಷ್ಟೋ ಉದಾಹರಣೆಗಳಿವೆ. ಆದ್ದರಿಂದ ಈಗಾಗಲೇ ಒಬ್ಬರಿಗೊಬ್ಬರು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿರೋ ಈ ನವ ದಂಪತಿಗಳನ್ನು ಪೊಲೀಸರು ಒಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.