ಮಂಡ್ಯ: ನಿಮ್ಮ ವೈಯಕ್ತಿಕ ಅಸಮಾಧಾನ ಏನೇ ಇರಲಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮುಖ್ಯಮಂತ್ರಿಯವರಿಗೆ ಮಾಜಿ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಈ ಮನವಿ ಮೂಲಕ ಸಿಎಂ ಅವರು ತಮ್ಮ ಮಗನ ಸೋಲಿನ ನಂತರ ಮಂಡ್ಯ ಜಿಲ್ಲೆಯನ್ನು ಕಡೆಗಣಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ರೈತರ ಬೆಳೆಗೆ ಕಾವೇರಿ ನೀರು ಬಿಡುವ ಬಗ್ಗೆ ಮಾತನಾಡಿದ ಅವರು, ರೈತರಿಗೆ 10-15 ದಿನ ನೀರು ಬಿಡುವ ಅವಕಾಶ ಇತ್ತು. ಇಂದು ದುರಾದೃಷ್ಟ ಜಿಲ್ಲೆಯ ಒಬ್ಬ ಜನಪ್ರತಿನಿಧಿಯೂ ಕಾವೇರಿ ಸಭೆ ಕರೆಯಲಿಲ್ಲ. ಮುಖ್ಯಮಂತ್ರಿ ಬಳಿಯೂ ಜಿಲ್ಲೆಯ ಸಮಸ್ಯೆ ಬಗ್ಗೆ ಹೇಳಲಿಲ್ಲ. ಅದಕ್ಕೆ ಕಾರಣ ಕಳೆದ ಚುನಾವಣೆಯಲ್ಲಿ ವ್ಯತ್ಯಾಸ ಮಾಡಿದರು ಎಂದು ಸಿಟ್ಟು ಬಂದಿದೆಯೋ, ಜನಕ್ಕೆ ಸಹಾಯ ಮಾಡೋದು ಬೇಡ ಎಂಬ ಅಸಮಾಧಾನ ಆಗಿದೆಯೋ ಗೊತ್ತಾಗುತ್ತಿಲ್ಲ ಎಂದರು.
Advertisement
Advertisement
ಈಗ ನೀರನ್ನು ಬಿಡಲು ಪ್ರಾಧಿಕಾರದ ಒಪ್ಪಿಗೆ ಬೇಕು ಎಂಬ ಸಬೂಬು ಹೇಳುತ್ತಿದ್ದಾರೆ. ಪ್ರಾಧಿಕಾರ ರಚನೆ ಆದ ಮೇಲೂ ಚುನಾವಣೆಗೆ ಮುಂಚೆ ಪ್ರಾಧಿಕಾರದ ಅನುಮತಿ ಪಡೆಯದೆ ಮೂರು ಬಾರಿ ನೀರು ಕೊಟ್ಟಿದ್ದಾರೆ. ನಂತರ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ ನಿದರ್ಶನ ಇದೇ ಸರ್ಕಾರದಲ್ಲಿ ಇದೆ. ಈ ಬಾರಿಯೂ ನೀರು ಬಿಡಲು ಅವಕಾಶ ಇದ್ದರೂ ನೀರು ಬಿಟ್ಟಿಲ್ಲ. ಇರುವ ನೀರನ್ನು ಬಳಸಬೇಡಿ ಎಂದು ಪ್ರಾಧಿಕಾರ ಹೇಳಿಲ್ಲ. ಬೆಳೆಗೂ ನೀರು ಕೊಟ್ಟು ಕುಡಿಯುವುದಕ್ಕೂ ನೀರು ಉಳಿಸಿಕೊಳ್ಳಬಹುದಿತ್ತು. ಆದರೆ ಖಡಾಖಂಡಿತವಾಗಿ ನೀರು ಬಿಡೋದು ಬೇಡ ಎಂದು ತೀರ್ಮಾನಿಸಿದ್ದಾರೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ಜನ ತುಂಬಾ ಒಳ್ಳೆಯವರು. ಮೋಸ ಮಾಡಿದರೂ ಸಹಿಸಿಕೊಳ್ಳುತ್ತೀರಿ. ಇದನ್ನು ನೀವು ಎಂದಾದರೂ ಒಂದು ದಿನ ಅರ್ಥ ಮಾಡಿಕೊಳ್ಳುತ್ತೀರಿ. ಆದರೆ ಈ ಸರ್ಕಾರ, ಇವತ್ತಿನ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯನ್ನು ಕಡೆಗಣಿಸುವುದು ಸೂಕ್ತ ಅಲ್ಲ. ಅನೇಕ ಬಾರಿ ಮಂಡ್ಯ ಜಿಲ್ಲೆ ಪೂರ್ಣ ಪ್ರಮಾಣದ ಆಶೀರ್ವಾದವನ್ನು ನಿಮಗೆ ಮಾಡಿದೆ. ಹೀಗಾಗಿ ನಿಮ್ಮ ವೈಯಕ್ತಿಯ ಕಾರಣ ಏನೇ ಇರಲಿ, ಯಾವುದೇ ದೃಷ್ಟಿಯಿಂದ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.