– ನಿಮ್ಮ ತೀರ್ಪು ಇತಿಹಾಸ ಸೃಷ್ಟಿಸಬೇಕು
ಬೆಂಗಳೂರು: ನಿಮ್ಮನ್ನು ಬಹಳ ಚಿಕ್ಕವಯಸ್ಸಿನಿಂದಲೇ ನಾನು ನೋಡಿದ್ದೇನೆ. ಅಂದು ಸ್ಪೀಕರ್ ಆಗಿದ್ದಾಗ ಸಾಕಷ್ಟು ಎಮೋಷನಲ್ ಆಗಿದ್ದನ್ನು ಕೂಡ ನಾನು ಕಂಡಿದ್ದೇನೆ. ಅಲ್ಲದೇ ಅಂದು ಈ ಕುರ್ಚಿ ಬಿಟ್ಟು ಎದ್ದು ಹೋಗಿದ್ದನು ಕೂಡ ನಾನು ಗಮನಿಸಿದ್ದೇನೆ. ಆದ್ರೆ ಇಂದು ಮತ್ತೆ ಎಮೋಷನಲ್ ಆಗಬೇಡಿ ಎಂದು ಸಚಿವ ಡಿಕೆ ಶಿವಕುಮಾರ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು.
ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಯವರು ಆಪರೇಷನ್ ಕಮಲ ಮಾಡಿರುವ ಆಡಿಯೋದಲ್ಲಿ 50 ಕೋಟಿ ಕೊಟ್ಟು ಸ್ಪೀಕರ್ ಅವರನ್ನು ಖರೀದಿಸಿರುವ ವಿಚಾರ ಭಾರೀ ಸದ್ದು ಮಾಡಿತ್ತು. ಕಲಾಪದ ಆರಂಭದಲ್ಲೇ ಸ್ಪೀಕರ್ ಈ ವಿಚಾರ ಪ್ರಸ್ತಾಪಿಸಿ ಕಣ್ಣೀರು ಹಾಕಿದ್ರು. ಹೀಗಾಗಿ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ದಯವಿಟ್ಟು ಇದನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಬಗ್ಗೆ ಕೇವಲವಾಗಿ ಮಾತನಾಡಿದವರು, ಖರೀದಿ ಮಾಡಿದ್ದೀವಿ ಎಂದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.
ನೀವು ಒಂದು ದೊಡ್ಡ ಸ್ಥಾನದಲ್ಲಿ ಕುಳಿತಿದ್ದೀರಿ. ಇಲ್ಲಿ ಬಹಳ ದೊಡ್ಡ ದೊಡ್ಡ ವಿಚಾರ ಅಡಗಿರುವುದರಿಂದ ಇಂದು ಇಡೀ ದೇಶ ಹಾಗೂ ಹೊರದೇಶದಲ್ಲಿಯೂ ಕರ್ನಾಟಕದ ಪ್ರಜಾಪ್ರಭುತ್ವನ್ನು ಗಮನಿಸುತ್ತಿದೆ. ಹೀಗಾಗಿ ತಾವು ಎಮೋಷನಲ್ ಆಗಿ ಯಾವ ತೀರ್ಮಾನವನ್ನು ತೆಗೆದುಕೊಳ್ಳಬಾರದು. ಇದು ತಮ್ಮ ಒಬ್ಬರದ್ದೇ ವಿಚಾರವಲ್ಲ. ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿರುವವರು ಅವರಿಗೆ ತಿಳಿದ ವಿಚಾರದ ಪತ್ರವನ್ನು ತಮಗೆ ಕೊಟ್ಟು, ಅದನ್ನು ಕೂಡ ತಾವು ಗಮನದಲ್ಲಿಟ್ಟುಕೊಂಡು ಇಂದು ಪ್ರಸ್ತಾಪ ಮಾಡಿದ್ದೀರಿ.
ಇಲ್ಲಿ ಶಾಸಕ ಹಾಗೂ ಸಚಿವರ ಮರ್ಯಾದೆ ಎಲ್ಲಾ ಹಾಳಾಗಿ ಹೋಗುತ್ತಿದೆ. ಇದರಿಂದ ಇಂದು ನಾವು ಯಾರೂ ಕೂಡ ತಲೆ ಎತ್ತಿ ನಡೆಯೋ ಹಾಗಿಲ್ಲ. ಹೀಗಾಗಿ ತಾವು ಅದನ್ನು ಪ್ರಶ್ನೆ ಮಾಡಿದ್ದೀರಿ. ನಮ್ಮ ಗೌರವವನ್ನು ಉಳಿಸಬೇಕಾದವರು ಹಾಗೆಯೇ ನಮ್ಮನ್ನು ರಕ್ಷಣೆ ಮಾಡಬೇಕಾದವರು ನೀವು. ಹೀಗಾಗಿ ತಾವು ಮೇಲ್ಗಡೆ ಕೂತಂತಹ ಸಂದರ್ಭದಲ್ಲಿ ನಿಮ್ಮದೊಂದು ವಿಚಾರದಲ್ಲಿ ಮಾತ್ರ ನೀವು ತೀರ್ಪು, ಆದೇಶ, ಸಂದೇಶ, ಈ ಸರ್ಕಾರಕ್ಕೆ ಹಾಗೂ ಈ ಮನೆಗೆ ನೀವು ಅವಕಾಶ ಮಾಡಿಕೊಡಬಾರದು ಅಂದ್ರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು, ಸಚಿವರನ್ನು ನೀವು ರಕ್ಷಣೆ ಮಾಡಬೇಕು. ಸಂಸತ್ತಿನ ವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಹಳ್ಳಿಗಳಲ್ಲಿ ನಮ್ಮ ಬಗ್ಗೆ ಏನು ಮಾತಾಡ್ತಿದ್ದಾರೆ. ಹೀಗಾಗಿ ಇಲ್ಲಿ ನೀವು ನಿಮ್ಮ ಬಗ್ಗೆ ಮಾತ್ರ ಚರ್ಚೆ ನಡೆಸಬಾರದು ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಈ ಬಗ್ಗೆ ನೀವು ಕೊಡುವ ಆದೇಶ ಇತಿಹಾಸವಾಗಲೇ ಬೇಕು. ಈ ಮೂಲಕ ತಮ್ಮ ತೀರ್ಪನ್ನು ಇಡೀ ದೇಶ ನೋಡುವಂತಾಗಬೇಕು. ಇಲ್ಲಿ ನಾನು ಯಾರನ್ನೂ ಆರೋಪಿಗಳನ್ನಾಗಿ ಮಾಡಿ ಎಂದು ಹೇಳುತ್ತಿಲ್ಲ. ಆದ್ರೆ ಸಮಗ್ರ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿ, ಮನವಿ ಮಾಡಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv