ಉಕ್ರೇನ್ (Ukraine) ವಿರುದ್ಧ ನಿರಂತರ ಯುದ್ಧದಲ್ಲಿ ತೊಡಗಿರುವ ರಷ್ಯಾ (Russia) ಈಗ ಮಕ್ಕಳನ್ನು ಸಹ ವೆಪನ್ ರೀತಿ ಬಳಕೆ ಮಾಡಿಕೊಳ್ಳುತ್ತಿದೆ. ಉಕ್ರೇನ್‌ನ್ನು ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ರಷ್ಯಾ ಮಕ್ಕಳನ್ನು (Children) ಮಿಲಿಟರಿ ಡ್ರೋನ್‌ಗಳ (Military Drone) ತಯಾರಿಕೆಗೆ ಬಳಕೆ ಮಾಡಿಕೊಳ್ಳುತ್ತಿದೆ. ವಿಡಿಯೋ ಗೇಮ್‌ನ್ನು ಬಳಸಿಕೊಂಡು ಪ್ರತಿಭಾವಂತ ಮಕ್ಕಳನ್ನು ಗುರುತಿಸಲಾಗುತ್ತಿದೆ. ಇದಕ್ಕಾಗಿ ಬೆರ್ಲೋಗಾ ಎಂಬ ವಿಡಿಯೋ ಗೇಮ್ ಬಳಸಿಕೊಂಡು ಅದರಲ್ಲಿ ಟಾಸ್ಕ್ ಪೂರೈಸಿದವರನ್ನು ಮಿಲಿಟರಿ ಡ್ರೋನ್ ವಿನ್ಯಾಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಷ್ಯಾದಿಂದ ಗಡೀಪಾರಾದ ಸುದ್ದಿ ಸಂಸ್ಥೆ ಇನ್‌ಸೈಡರ್ ನಡೆಸಿದ ತನಿಖಾ ವರದಿಯಲ್ಲಿ ಈ ವಿಚಾರ ಬಯಲಾಗಿದೆ.
ಏನಿದು ಬೆರ್ಲೋಗಾ ಗೇಮ್
ರಷ್ಯಾದಲ್ಲಿ 2022 ರಲ್ಲಿ ಬೆರ್ಲೋಗಾ ಎಂಬ ವಿಡಿಯೋ ಗೇಮ್ ಆರಂಭಿಸಲಾಯಿತು. ಈ ಗೇಮ್‌ನಲ್ಲಿ ʻಕರಡಿಗಳುʼ ಜೇನುನೊಣಗಳ ಹಿಂಡುಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಗೇಮ್‌ನಲ್ಲಿ ಜೇನು ನೊಣಗಳನ್ನು ಹಿಮ್ಮೆಟ್ಟಿಸಲು ಡ್ರೋನ್‌ಗಳನ್ನು ಸಹ ಬಳಸಲಾಗುತ್ತದೆ. ರಷ್ಯಾದ ಲಕ್ಷಾಂತರ ಯುವಕರು ಈ ಆಟವನ್ನು ಆಡುತ್ತಾರೆ. ಅತ್ಯಂತ ಯಶಸ್ವಿ ಆಟಗಾರರಿಗೆ ಹೊಸ ಹೊಸ ಟಾಸ್ಕ್‌ಗಳು ಎದುರಾಗುತ್ತಾ ಹೋಗುತ್ತದೆ. ಹೀಗೆ ಟಾಸ್ಕ್‌ಗಳನ್ನು ಪೂರೈಸಿದವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಡ್ರೋನ್‌ಗಳ ವಿನ್ಯಾಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ಈ ಗೇಮ್‌ನಲ್ಲಿ ಹೆಚ್ಚಿನ ಟಾಸ್ಕ್ ಪೂರೈಸಿದವರಿಗೆ ಶಾಲೆಯಲ್ಲಿ ಹೆಚ್ಚಿನ ಅಂಕಗಳು ಸಿಗುತ್ತದೆ ಎನ್ನಲಾಗಿದೆ. ಈ ರೀತಿ ಬೆರ್ಲೋಗಾ ಗೇಮ್ ಆಡಲು ಮಕ್ಕಳನ್ನು ಪ್ರೇರೇಪಿಸಲಾಗುತ್ತದೆ. ಶಾಲೆಗಳಲ್ಲಿ ಇದೊಂದು ಅಲಿಖಿತ ನಿಯಮ ಎಂದು ವ್ಯಕ್ತಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವಿಡಿಯೋ ಗೇಮ್‌ನಿಂದ ಕಂಪನಿಗಳ ಕಡೆಗೆ!
ರಷ್ಯಾದ ಅಧಿಕಾರಿಗಳು ದೇಶಾದ್ಯಂತ ಮಿಲಿಟರಿ ಡ್ರೋನ್‌ಗಳನ್ನು ವಿನ್ಯಾಸಗೊಳಿಸಲು ಮಕ್ಕಳ ಹುಡುಕಾಟ ನಡೆಸುತ್ತಿದ್ದಾರೆ. ಈ ಹುಡುಕಾಟ, ಮುಗ್ದ ಮಕ್ಕಳ ವಿಡಿಯೋ ಗೇಮ್‌ನೊಂದಿಗೆ ಪ್ರಾರಂಭವಾಗಿ, ಅತ್ಯಂತ ಪ್ರತಿಭಾನ್ವಿತ ಮಕ್ಕಳ ರಕ್ಷಣಾ ಕಂಪನಿಗಳ ಸೇರ್ಪಡೆಯೊಂದಿಗೆ ಕೊನೆಗೊಳ್ಳುತ್ತದೆ. ಅಲ್ಲದೇ ಯುದ್ಧಕ್ಕಾಗಿ ಯುವಕರನ್ನು ಪ್ರಚೋದಿಸಲು ದೇಶಭಕ್ತಿ ಮತ್ತು ಮಿಲಿಟರಿ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಇನ್‌ಸೈಡರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪತ್ರಕರ್ತ ಹೇಳಿದ್ದೇನು?
ರಷ್ಯಾದ ಮಕ್ಕಳು ಡ್ರೋನ್‌ಗಳ ವಿನ್ಯಾಸದಲ್ಲಿ ಸಕ್ರಿಯರಾಗಿದ್ದಾರೆ. ಡ್ರೋನ್ ವಿನ್ಯಾಸ ಮಾಡುವ ಹಲವಾರು ಮಕ್ಕಳ ಬಗ್ಗೆ ನನಗೆ ತಿಳಿದಿದೆ. ಈ ಬಗ್ಗೆ ಮಕ್ಕಳು ಸಹ ನಮಗೆ ಮಾಹಿತಿ ನೀಡಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿಕೊಂಡಿದ್ದಾರೆ.
14 – 15 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಡ್ರೋನ್ ತಯಾರಿಕೆಯ ಅಧ್ಯಯನ ಮಾಡಲು ಮತ್ತು ನಂತರ ಕಾರ್ಖಾನೆಯಲ್ಲಿ ಕೆಲಸ ಮಾಡಲು ಅಲಬುಗಾ ಕಾರ್ಖಾನೆ ಆಹ್ವಾನಿಸಿದೆ. ಈ ಬಗ್ಗೆ ರಷ್ಯಾದ ಸರ್ಕಾರಿ ಸ್ವಾಮ್ಯದ ಜ್ವೆಜ್ಡಾ ಟಿವಿ ಚಾನೆಲ್‌ನಲ್ಲಿ, ಮಕ್ಕಳು ಕಂಪ್ಯೂಟರ್‌ಗಳ ಬಳಿ ಕುಳಿತ ಹಾಗೂ ಡ್ರೋನ್‌ಗಳನ್ನು ಜೋಡಿಸುವ ದೃಶ್ಯ ಪ್ರಸಾರ ಆಗಿತ್ತು.
ರಷ್ಯಾ – ಉಕ್ರೇನ್ ವಾರ್‌ನಲ್ಲಿ ಡ್ರೋನ್‌ಗಳ ಪಾತ್ರ
ರಷ್ಯಾ ಮತ್ತು ಉಕ್ರೇನ್‌ಗೆ ಯುದ್ಧದದಲ್ಲಿ ಡ್ರೋನ್‌ಗಳು ಪ್ರಮುಖ ಪಾತ್ರವಹಿಸುತ್ತಿವೆ. ಇದರಿಂದಾಗಿ ಡ್ರೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ವ್ಲಾಡಿಮಿರ್ ಪುಟಿನ್ ರಷ್ಯಾದ ಕಂಪನಿಗಳಿಗೆ ಕರೆ ನೀಡಿದ್ದಾರೆ. ಇನ್ನೂ, ಡ್ರೋನ್‌ಗಳ ಹೆಚ್ಚಿನ ಸಾಮರ್ಥ್ಯಕ್ಕಾಗಿ ಮತ್ತು ಎಲೆಕ್ಟ್ರಾನಿಕ್ ಜಾಮಿಂಗ್ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಎರಡೂ ಕಡೆಯವರು ಹೊಸ ತಂತ್ರಜ್ಞಾನಗಳ ಮೊರೆ ಹೋಗಿದ್ದಾರೆ. ಇದೇ ಕಾರಣಕ್ಕೆ ರಷ್ಯಾ ಹೊಸ ಹೊಸ ಆವಿಷ್ಕಾರಕ್ಕಾಗಿ ಮಕ್ಕಳನ್ನು ಸಹ ಮಿಲಿಟರಿ ಡ್ರೋನ್‌ಗಳ ತಯಾರಿಕೆಗೆ ಬಳಸಿಕೊಳ್ಳುತ್ತಿದೆ.
ಡ್ರೋನ್ ಬಳಸಿ 40 ಯುದ್ಧ ವಿಮಾನ ಧ್ವಂಸ ಮಾಡಿದ್ದ ಉಕ್ರೇನ್
ಇತ್ತೀಚೆಗೆ ಉಕ್ರೇನ್ ರಷ್ಯಾದ ಒಲೆನ್ಯಾ ಮತ್ತು ಬೆಲಾಯಾದಲ್ಲಿನ ವಾಯುನೆಲೆಗಳು ಸೇರಿದಂತೆ ರಷ್ಯಾದ ಮಿಲಿಟರಿ ವಾಯುನೆಲೆಗಳ ಮೇಲೆ ಏಕಕಾಲದಲ್ಲಿ ಡ್ರೋನ್ ದಾಳಿ ನಡೆಸಿತ್ತು. ದಾಳಿಯಲ್ಲಿ ವಾಯುನೆಲೆಯಲ್ಲಿದ್ದ 40 ಕ್ಕೂ ಹೆಚ್ಚು ಯುದ್ಧ ವಿಮಾನಗಳು ನಾಶವಾಗಿದ್ದವು. ಅತ್ಯಂತ ಕಡಿಮೆ ಬೆಲೆಯ ಡ್ರೋನ್‌ಗಳಿಂದ ರಷ್ಯಾದ 7 ಬಿಲಿಯನ್ ಡಾಲರ್ ಮೌಲ್ಯದ ಯುದ್ಧ ವಿಮಾನಗಳು ಸುಟ್ಟು ಭಸ್ಮವಾಗಿದ್ದವು. ಇದು ರಷ್ಯಾ ಇತಿಹಾಸದಲ್ಲೇ ಅತಿದೊಡ್ಡ ಡ್ರೋನ್ ದಾಳಿಯಾಗಿದೆ.
ಮಕ್ಕಳನ್ನು ಈ ರೀತಿ ಬಳಸೋದು ಎಷ್ಟು ಸರಿ?
ಯುದ್ಧ ಸಾಮಾಗ್ರಿಗಳನ್ನು ತಯಾರಿಸಲು, ಯುದ್ಧಕಾಲದಲ್ಲಿ ಮಿಲಿಟರಿ ಸಂಬಂಧಿತ ಕಾಖಾನೆಗಳಲ್ಲಿ ಮಕ್ಕಳನ್ನು ಬಳಕೆ ಮಾಡೋದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ. ಇದು ಮಕ್ಕಳ ಹಕ್ಕುಗಳ ವಿರುದ್ಧವಾಗಿದೆ. ಇದರಿಂದಾಗಿ ಶಿಕ್ಷಣ, ಮಕ್ಕಳ ಆರೋಗ್ಯ, ಅಮೂಲ್ಯವಾದ ಬಾಲ್ಯ ಅವರಿಗೆ ಸಿಗದಂತಾಗುತ್ತದೆ ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ.
ಇನ್‌ಸೈಡರ್ ವರದಿ ಮಾಡಿದ್ದು ಹೇಗೆ?
ರಷ್ಯಾದಲ್ಲಿ ಮಿಲಿಟರಿ ಸಂಬಂಧಿತ ಕಾರ್ಖಾನೆಗಳ ಬಳಿ ತೆರಳಿ ವರದಿ ಮಾಡಲು ಸರ್ಕಾರಿ ಸ್ವಾಮ್ಯದ ಮಾಧ್ಯಮಕ್ಕೆ ಮಾತ್ರ ಅವಕಾಶವಿದೆ. ಹೀಗಿದ್ದರೂ ಇನ್‌ಸೈಡರ್ ಮಕ್ಕಳನ್ನು ಬಳಸಿಕೊಂಡು ಡ್ರೋನ್ ತಯಾರಿಸುವ ಸ್ಥಳಕ್ಕೆ ತೆರಳಿ ವರದಿ ಮಾಡಿದೆ. ವರದಿಗಾರರು ಸರ್ಕಾರಿ ಸ್ವಾಮ್ಯದ ಮಾಧ್ಯಮದ ಸಿಬ್ಬಂದಿಯಂತೆ ನಟಿಸಿ ವರದಿ ಮಾಡಿದ್ದಾರೆ. ಈ ವಿಚಾರ ಗೊತ್ತಾದ ಬಳಿಕ ಈ ಸಂಸ್ಥೆಯನ್ನು ದೇಶದಿಂದ ಹೊರಗೆ ದಬ್ಬಲಾಗಿದೆ.