– ಮೈಸೂರು ಸೇರಿ 5 ನಗರಗಳಲ್ಲಿ ನಡೆದಿತ್ತು ಪ್ಲಾಸ್ಟಿಕ್ ನೋಟುಗಳ ಪ್ರಯೋಗ
ಮುಂಬೈ: ಶೀಘ್ರದಲ್ಲೇ ದೇಶದ ಹಣಕಾಸು ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗುವ ಮುನ್ಸೂಚನೆ ಇದೆ. ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನ (Polymer Or Plastic Currency) ದೇಶದ ಜನರಿಗೆ ಪರಿಚಯಿಸುವ ಪ್ರಸ್ತಾಪವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಗಣಿಸಿದೆ.
ಈ ಬಗ್ಗೆ ಮಾತನಾಡಿರುವ ಆರ್‌ಬಿಐ ಗವರ್ನರ್ (RBI Governor) ಸಂಜಯ್ ಮಲ್ಹೋತ್ರಾ, ಪಾಲಿಮರ್ ನೋಟುಗಳನ್ನ ಜಾರಿಗೊಳಿಸಲು ನಾವು ಚಿಂತನೆ ನಡೆಸುತ್ತಿದ್ದೇವೆ. ಇದರ ಸಾಧಕ ಬಾಧಕಗಳ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಈ ಪ್ರಸ್ತಾಪವು ಸದ್ಯ ಪ್ರಾಥಮಿಕ ಹಂತದಲ್ಲಿದ್ದು, ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ನಿರ್ಧಾರ ತೆಗೆದುಕೊಂಡ ಬಳಿಕ ಅಧಿಕೃತ ಮಾಹಿತಿ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಏನಿದು ಪಾಲಿಮರ್ ನೋಟು?
ನಾವು ದಿನನಿತ್ಯ ಬಳಸುವ ಕಾಗದದ ನೋಟುಗಳಿಗಿಂತ ಇವು ಸಂಪೂರ್ಣ ಭಿನ್ನ. ತೆಳುವಾದ, ಸುಲಭವಾಗಿ ಮಡಚಬಹುದಾದ ಮತ್ತು ದೀರ್ಘಕಾಲಿಕ ಬಾಳಿಕೆ ಬರುವ ನೋಟುಗಳು. ಕಾಗದದ ನೋಟುಗಳ ಮುದ್ರಣದ ವೆಚ್ಚ ತೀವ್ರವಾಗಿ ಹೆಚ್ಚಳವಾಗುತ್ತಿರುವುದರಿಂದ ಮತ್ತು ಪ್ರತಿ ವರ್ಷ ಹರಿದ ನೋಟುಗಳನ್ನ ಚಲಾವಣೆಯಿಂದ ಹಿಂಪಡೆಯುತ್ತಿರುವುದನ್ನು ತಡೆಯಲು ಆರ್‌ಬಿಐ ಈ ಪ್ರಮುಖ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಈ ಹಿಂದೆಯೇ ಪ್ರಯೋಗ ನಡೆದಿತ್ತು.
ಪ್ಲಾಸ್ಟಿಕ್ ನೋಟುಗಳ ಪರಿಚಯ ಭಾರತಕ್ಕೆ ಹೊಸದೇನಲ್ಲ. 2014ರಲ್ಲೇ ಕೇಂದ್ರ ಸರ್ಕಾರವು ದೇಶದ ವಿವಿಧೆಡೆ ಈ ಪ್ರಯೋಗ ನಡೆಸಿತ್ತು. ದೇಶದ 5 ಪ್ರಮುಖ ನಗರಗಳಾದ ಮೈಸೂರು, ಕೊಚ್ಚಿ, ಜೈಪುರ, ಶಿಮ್ಲಾ ಮತ್ತು ಭುವನೇಶ್ವರಗಳಲ್ಲಿ ಪ್ರಾಯೋಗಿಕವಾಗಿ 10 ರೂ. ಮುಖಬೆಲೆಯ 100 ಕೋಟಿ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲಾಗುವುದು ಎಂದು ಸರ್ಕಾರ ಸಂಸತ್ತಿಗೆ ತಿಳಿಸಿತ್ತು.
ಪ್ರಸ್ತುತ ಆರ್‌ಬಿಐ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆಗೊಳಿಸಲು ಚಿಂತನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಕೈಗೆ ಕಾಗದದ ನೋಟುಗಳ ಬದಲು ಪ್ಲಾಸ್ಟಿಕ್ ನೋಟುಗಳು ಬಂದರೂ ಅಚ್ಚರಿಪಡಬೇಕಾಗಿಲ್ಲ.
