ನವದೆಹಲಿ: ಬಹುಕೋಟಿ 2ಜಿ ಹಗರಣದ ಆರೋಪಿಗಳಿಗೆ 15 ಸಾವಿರ ಗಿಡಗಳನ್ನು ನೆಡುವ ಹಸಿರು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಇಂದು ವಿಧಿಸಿದೆ.
2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪವನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಲು ವಿಳಂಬ ನೀತಿ ಅನುಸರಿಸಿದ ಇಬ್ಬರು ಆರೋಪಿಗಳು ಮತ್ತು ಮೂರು ಕಂಪನಿಗಳಿಗೆ ತಲಾ 3 ಸಾವಿರ ಗಿಡಗಳನ್ನು ದಕ್ಷಿಣ ದೆಹಲಿಯ ಬೆಟ್ಟಗಳಲ್ಲಿ ನೆಡುವಂತೆ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ನಜಿಮಿ ವಜಿರಿ ಅವರು ಇಂದು ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ. ಸ್ವಾನ್ ಟೆಲಿಕಾಂ ಪ್ರೈವೆಟ್ ಲಿಮಿಟೆಡ್‍ನ ಶಾಹಿದ್ ಬಲ್ವಾ, ಕುಸೆಗಾಂವ್ ಫ್ರೂಟ್ಸ್ ಮತ್ತು ವೆಜಿಟೆಬಲ್ಸ್ ಪ್ರೈವೆಟ್ ಲಿಮಿಟೆಡ್‍ನ ನಿರ್ದೇಶಕ ಅಗರ್ವಾಲ್, ಡೈನಾಮಿಕ್ ರಿಯಾಲ್ಟಿ, ಡಿಬಿ ರಿಯಾಲ್ಟಿ ಲಿಮಿಟೆಡ್ ಮತ್ತು ನಿಹಾರ್ ಕನ್ಸ್ ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಪ್ರತಿಕ್ರಿಯೆ ನೀಡಲು ಅಂತಿಮ ಅವಕಾಶ ನೀಡಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯ 2017ರ ಡಿಸೆಂಬರ್ ನಲ್ಲಿ 2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪಿಗಳಾಗಿದ್ದ ದೂರಸಂಪರ್ಕ ಇಲಾಖೆಯ ಮಾಜಿ ಸಚಿವ ಎ.ರಾಜಾ, ಕನಿಮೋಲಿ ಸೇರಿ 16 ಮಂದಿಯನ್ನು ಖುಲಾಸೆಗೊಳಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv