ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಗ್ರಾಮದ ಯುವಕ ಅವೈಸ್ ಅಹ್ಮದ್ (Awais Ahmed) ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿದ್ದಾರೆ.
ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ‘ಪಿಕ್ಸೆಲ್’ (Pixxel) ಸಂಸ್ಥೆಯ ಸಹ-ಸ್ಥಾಪಕರಾದ ಅವೈಸ್ ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅವರ ಯಶೋಗಾಥೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ

ಪಿಕ್ಸೆಲ್ಗೆ ಜಾಗತಿಕ ಮನ್ನಣೆ
ಪಿಕ್ಸೆಲ್ ಸಂಸ್ಥೆಯು ಅಮೆರಿಕದ ನ್ಯಾಷನಲ್ ರಿಕಾನ್ನೈಸನ್ಸ್ ಆಫೀಸ್ (NRO) ಜೊತೆಗೂ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಭೂಮಿಯನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಲು ನೆರವಾಗುವಂತಹ ಬಲಿಷ್ಠ ಉಪಗ್ರಹಗಳನ್ನು ಪಿಕ್ಸೆಲ್ ಕಂಪನಿ ನಿರ್ಮಿಸುತ್ತಿದೆ.

9 ಅತ್ಯಾಧುನಿಕ ಉಪಗ್ರಹಗಳ ಉಡಾವಣೆ
ಇದುವರೆಗೂ ಪಿಕ್ಸೆಲ್ ಕಂಪನಿ 9 ಅತ್ಯಾಧುನಿಕ ಉಪಗ್ರಹಗಳ ಉಡಾವಣೆ ಮಾಡಿದೆ. ಈ ಕಂಪನಿ ಹೂಡಿಕೆದಾರರಿಂದ 960 ಕೋಟಿ ರೂ. ಹೂಡಿಕೆ ಪಡೆದಿದೆ. ಜಾಗತಿಕ ಮಟ್ಟದಲ್ಲಿ 275ಕ್ಕೂ ಹೆಚ್ಚು ಉದ್ಯೋಗಿಗಳನ್ನು ಪಿಕ್ಸೆಲ್ ಸಂಸ್ಥೆ ಹೊಂದಿದೆ.
ಸಾಲ ಮಾಡಿ, ಚಿನ್ನ ಅಡವಿಟ್ಟು ಮಗನ ಕನಸಿಗೆ ಪೋಷಕರು ನೀರೆರೆದಿದ್ದರು. ಈಗ ಪೋಷಕರ ತ್ಯಾಗಕ್ಕೆ ವಿಶ್ವಮಟ್ಟದ ಸಾಧನೆಯ ಮೂಲಕ ಪುತ್ರ ಗೌರವ ತಂದಿದ್ದಾನೆ ಎಂದು ಗ್ರಾಮಸ್ಥರು ಕೊಂಡಾಡಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆಲ್ದೂರಿನಲ್ಲೇ ಓದಿದ ಅವೇಜ್, ಚಿಕ್ಕಂದಿನಿಂದಲೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸಿನೊಂದಿಗೇ ಮುನ್ನಡೆಯುತ್ತಿದ್ದರು. ಈಗ ತನ್ನ ಬಯಕೆಯಂತೆ ವಿಜ್ಞಾನಿಯಾಗಿ ಜಗತ್ತೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾರೆ.
ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿ ಇಂದು ಏರೋಸ್ಪೇಸ್ ಪಿಕ್ಸೆಲ್ ಹೆಸರಿನಲ್ಲಿ ಉಪಗ್ರಹ ತಯಾರಿಕಾ ಸ್ವಂತ ಕಂಪನಿ ಕೂಡ ಆರಂಭಿಸಿದ್ದಾರೆ. 2022ರಲ್ಲಿ ಅಮೆರಿಕದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಶಕುಂತಲಾ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದರು.
