ಕೊಪ್ಪಳ: ದೀಪಾವಳಿ ಹಬ್ಬಕ್ಕೆಂದು ಬಟ್ಟೆ ಖರೀದಿಸಲು ಅಂಗಡಿಗೆ ಹೋದಾಗ ನಿಮ್ಮ ಜೇಬಿಗೆ ಕತ್ತರಿ ಬೀಳಬಹುದು, ಹುಷಾರಾಗಿರಿ. ಯಾಕಂದ್ರೆ ಇಂತಂಹದೊಂದು ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲೆಯ ಕುಷ್ಟಗಿಯ ಮಹಾವೀರ ಕ್ಲಾತ್ ಸ್ಟೋರ್‍ಗೆ ಗ್ರಾಹಕರೊಬ್ಬರು ಬಟ್ಟೆ ಖರೀದಿಸಲು ಹೋಗಿದ್ದಾಗ ಪಿಕ್‍ಪಾಕೆಟ್ ಆಗಿದೆ. ಕಳ್ಳತನ ಮಾಡಿರುವುದು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಸಹಾಯದಿಂದ ಪೊಲೀಸರು ಆರೋಪಿ ಸುನೀಲ್ ನಾಯಕ್‍ನನ್ನು ಬಂಧಿಸಿದ್ದಾರೆ.
Advertisement
ಶರಣಪ್ಪ ಗುರಿಕಾರ ಎಂಬ ಗ್ರಾಹಕ ದೀಪಾವಳಿಗಾಗಿ ಬಟ್ಟೆ ಖರೀದಿಸ ಹೋಗಿದ್ದರು. ಬಟ್ಟೆಗಳನ್ನು ಖರೀದಿಸಿದ ನಂತರ ಬಿಲ್ ಕೊಡಲು ಕೌಂಟರ್‍ಗೆ ಬಂದಿದ್ದಾರೆ. ಆರೋಪಿ ಸುನೀಲ್ ಅಲ್ಲೇ ಅಂಗಡಿಯಲ್ಲಿ ಸುತ್ತಾಡಿಕೊಂಡು ಅವರ ಹಿಂದೆಯೇ ಹೋಗಿದ್ದಾನೆ. ಹಬ್ಬದ ಪ್ರಯುಕ್ತ ಗ್ರಾಹರು ಹೆಚ್ಚಾಗಿದ್ದರಿಂದ ಅವರ ಮಧ್ಯೆ ಸೇರಿಕೊಂಡು ನಿಧಾನವಾಗಿ ಜೇಬಿಗೆ ಕೈ ಹಾಕಿ ಕಳ್ಳತನ ಮಾಡಿದ್ದಾನೆ. ಸುನೀಲ್ ಶರಣಪ್ಪ ಅವರ ಜೇಬಿಗೆ ಕತ್ತರಿ ಹಾಕಿ ನಂತರ ಮೆಲ್ಲಗೆ ಹಿಂದೆ ಸರಿದು ತನ್ನ ಜೇಬಿಗೆ ಹಣವನ್ನು ಇಟ್ಟುಕೊಂಡು ಯಾರಿಗೂ ಅನುಮಾನ ಬರಬಾರದು ಎಂದು ಮೆಲ್ಲಗೆ ಅಂಗಡಿಯಿಂದ ಹೋಗಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಶರಣಪ್ಪ ಬಿಲ್ ಕೊಡಲು ನೋಡಿದಾಗ ಹಣ ಕಳ್ಳತನವಾಗಿರೋದು ಗೊತ್ತಾಗಿದ್ದು, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಅಂಗಡಿಗೆ ಬಂದು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಬರೋಬ್ಬರಿ 90 ಸಾವಿರ ರೂ. ಹಣವನ್ನು ಜೇಬುಗಳ್ಳತನ ಮಾಡಿದ್ದು, ಬಂಧಿತನಿಂದ ಪೊಲೀಸರು ಹಣವನ್ನು ವಶ ಪಡಿಸಿಕೊಂಡಿದ್ದಾರೆ.