ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಣತಿಯಂತೆ ಈ ಫೋನ್ ಕದ್ದಾಲಿಕೆ ನಡೆದಿದೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಸಿಬಿಐ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಇಂತಹ ದೊಡ್ಡ ಪ್ರಕರಣಗಳನ್ನು ಸಿಬಿಐನಂತಹ ಸಂಸ್ಥೆಗಳಿಗೆ ವಹಿಸಬೇಕು. ಹೀಗಾಗಿ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ತಿಳಿಸಿದರು.
Advertisement
Advertisement
ಬೇಹುಗಾರಿಕೆ ಸಂಸ್ಥೆ ಮುಖ್ಯಮಂತ್ರಿಗಳ ಅಧೀನದಲ್ಲಿಯೇ ಇರುತ್ತದೆ. ಅವರ ಅಣತಿಯಂತೆ ಈ ಫೋನ್ ಕದ್ದಾಲಿಕೆ ಕೆಲಸ ನಡೆದಿದೆ. ಈ ಕುರಿತು ಸೂಕ್ತ ತನಿಖೆ ನಡೆಯಲಿದ್ದು, ತನಿಖೆಯಿಂದ ಎಲ್ಲಾ ಸತ್ಯ ಹೊರಬರಲಿದೆ. ಪ್ರವಾಹ ಇದೆ ಇಂತಹ ಸಂದರ್ಭದಲ್ಲಿ ಈ ನಿರ್ಧಾರ ಅಗತ್ಯವಿತ್ತೆ ಎಂದು ಕೆಲವರು ಟೀಕಿಸುತ್ತಿದ್ದಾರೆ ಎಂಬುದರ ಕುರಿತು ಉತ್ತರಿಸಿದ ಅವರು, ಪ್ರವಾಹ ಇದೆ ಎಂದು ಎಲ್ಲರೂ ಹಸಿದುಕೊಂಡೆ ಇದ್ದಾರಾ? ಕುಂಬಳಕಾಯಿ ಕಳ್ಳ ಅಂದರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.
Advertisement
ಯಾವುದೇ ವಿಚಾರವನ್ನು ನಾನು ಡೈವರ್ಟ್ ಮಾಡಿಲ್ಲ. ಸಿದ್ದರಾಮಯ್ಯ ಸೇರಿ ಸಾಕಷ್ಟು ಕಾಂಗ್ರೆಸ್ ನಾಯಕರು ಸಿಬಿಐ ತನಿಖೆಯಾಗಲಿ ಎಂದು ಒಕ್ಕೂರಲಿನಿಂದ ಒತ್ತಾಯ ಮಾಡಿದ್ದಾರೆ. ಫೋನ್ ಕದ್ದಾಲಿಕೆ ವಿಚಾರವನ್ನು ಮೊದಲು ಪ್ರಸ್ತಾಪ ಮಾಡಿದ್ದೇ ನಾನು. ಇದೀಗ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಬಿಐ ತನಿಖೆಗೆ ವಹಿಸಿದೆ. ಇದರಿಂದ ನನಗೂ ಸಂತೋಷವಾಗಿದೆ ಎಂದರು.
Advertisement
ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಸಿಬಿಐ ಅಲ್ಲ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಅಧಿಕಾರಿಗಳಿಂದಲೂ ತನಿಖೆ ನಡೆಸಲಿ. ದುರುದ್ದೇಶಪೂರ್ವಕವಾಗಿ ನನ್ನನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆದಿದೆ, ಇದಕ್ಕೆ ನಾನು ಹೆದರುವುದಿಲ್ಲ ಎಂದು ತಿಳಿಸಿದರು.