ಬೆಂಗಳೂರು: ನಗರದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ (Jnanabharathi Campus) ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟ ಘಟನೆ ನಡೆದಿದೆ.
ವಿದ್ಯಾರ್ಥಿಯನ್ನು ರಂಗನಾಥ್ ನಾಯಕ್ (27) ಎಂದು ಗುರುತಿಸಲಾಗಿದೆ. ಈತ ಚಿಕ್ಕಬಳ್ಳಾಪುರ ಮೂಲದವನು. ಕಳೆದ ಕೆಲ ತಿಂಗಳುಗಳ ಹಿಂದೆ ಬಸ್ ಆ್ಯಕ್ಸಿಡೆಂಟ್ ನಲ್ಲಿ ರಂಗನಾಥ್ ಗಾಯಗೊಂಡಿದ್ದ. ನಂತರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ. ಹೀಗಾಗಿ ಆಯುರ್ವೇದಿಕ್ ಔಷಧಿ ಪಡೆಯುತ್ತಿದ್ದನು.
ಬುಧವಾರ ಬೆಳಗ್ಗೆ ಕ್ಯಾಂಟೀನ್ ಗೆ ಹೋಗಿ ತಿಂಡಿ ತಿಂದು ರೂಮಿಗೆ ಹೋಗಿದ್ದ ರಂಗನಾಥ್ ನಂತರ ರೂಮ್ ಲಾಕ್ ಹಾಕಿಕೊಂಡಿದ್ದ. ಮಧ್ಯಾಹ್ನ ರೂಮೇಟ್ ಹೋಗಿ ಬಾಗಿಲು ಬಡಿದಾಗ ತೆಗೆದಿಲ್ಲ. ಹೀಗಾಗಿ ಡೋರ್ ಒಡೆದು ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ರಂಗನಾಥ್ ಹೇಗೆ ಸಾವನ್ನಪ್ಪಿದ್ದಾನೆ ಅನ್ನೋದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.