ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ತಲ್ಲಣ ಮೂಡಿಸಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೈದಿದ್ದ ಆರೋಪಿಗಳು ಕೊನೆಗೂ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ಮುಚ್ಚಿ ಹೋಗುತ್ತದೆ ಎನ್ನುವ ಆರೋಪಕ್ಕೆ ಗುರಿಯಾಗಿದ್ದ ಪ್ರಕರಣಕ್ಕೆ ಜೀವ ತುಂಬಿದ್ದಾರೆ.
ಚಾಮರಾಜನಗರ ಪಿಎಫ್‍ಐ ಜಿಲ್ಲಾ ಅಧ್ಯಕ್ಷ ಖಲೀಲುಲ್ಲಾ ಹಾಗೂ ಬಂಟ್ವಾಳದ ಸಜಿಪ ನಿವಾಸಿ ಪಿಎಫ್‍ಐ ಕಾರ್ಯಕರ್ತ ಅಬ್ದುಲ್ ಶಾಫಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನುಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Advertisement
ಕಳೆದ ಜುಲೈ 4ರಂದು ರಾತ್ರಿ 9.30ಕ್ಕೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ಲಾಂಡ್ರಿ ಶಾಪ್‍ಗೆ ಬಾಗಿಲು ಹಾಕುತ್ತಿದ್ದ ಶರತ್ ಮಡಿವಾಳನನ್ನು ಮೂವರು ಆಗಂತುಕರು ಬೈಕಿನಲ್ಲಿ ಬಂದು ಹತ್ಯೆಗೈದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್ ದೇಹವನ್ನು ಸ್ಥಳೀಯರು ಸೇರಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಮೂರು ದಿನಗಳ ಬಳಿಕ ಜುಲೈ 7ರಂದು ಶರತ್ ಸಾವನ್ನಪ್ಪಿರುವುದನ್ನು ಪೊಲೀಸರು ಘೋಷಿಸಿದ್ದರು.
Advertisement
ಘಟನೆಗೆ ಸಂಬಂಧಿಸಿದಂತೆ ಬಿ.ಸಿ.ರೋಡಿನಲ್ಲಿ ನಿಷೇಧಾಜ್ಞೆ ನಡುವೆಯೇ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಪ್ರತಿಭಟನೆ ನಡೆಸಿದ್ದು ಪೊಲೀಸ್ ಇಲಾಖೆಗೆ ಎಚ್ಚರಿಕೆ ರವಾನಿಸಿದಂತಾಗಿತ್ತು. ಆ ಬಳಿಕ ಪೊಲೀಸರು ಶರತ್ ಹತ್ಯೆ ಪ್ರಕರಣದ ತನಿಖೆಗೆ ಏಳು ಪ್ರತ್ಯೇಕ ಪೊಲೀಸರ ತಂಡಗಳನ್ನು ರಚಿಸಿ, ಮುಂಬೈ, ಬೆಂಗಳೂರು, ಕೇರಳಕ್ಕೂ ಕಳಿಸಿದ್ದರು. ಆದರೆ ಎರಡು ವಾರಗಳ ಹಿಂದೆ ಪೊಲೀಸ್ ತಂಡಗಳು ಬರಿಗೈಲಿ ವಾಪಸಾಗಿದ್ದರಿಂದ ಪ್ರಕರಣ ಇನ್ನೇನು ಮುಚ್ಚಿ ಹೋಗುತ್ತದೆ ಎನ್ನುವ ಅನುಮಾನ ಕೇಳಿಬಂದಿತ್ತು.
Advertisement
ಈ ನಡುವೆ, ಖಚಿತ ಮಾಹಿತಿ ಆಧರಿಸಿ ಸ್ಥಳೀಯ ಕೆಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಪಶ್ಚಿಮ ವಲಯ ಐಜಿಪಿ ಸ್ಥಾನದಿಂದ ನಿರ್ಗಮಿಸುತ್ತಿರುವ ಹರಿಶೇಖರನ್, ಹಠಾತ್ತಾಗಿ ಶರತ್ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಏಳು ತಂಡಗಳಲ್ಲಿ 30 ಪೊಲೀಸರು ಕಾರ್ಯನಿರ್ವಹಿಸಿದ್ದು ಸವಾಲಾಗಿದ್ದ ಪ್ರಕರಣವನ್ನು ಬೇಧಿಸಿದ್ದಾರೆ, ಒಟ್ಟು ಐದು ಮಂದಿ ಪ್ರಕರಣದ ಆರೋಪಿಗಳಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
Advertisement
ಹತ್ಯೆಗೆ ಕಾರಣ ಏನು?
ಶರತ್ ಹತ್ಯೆಯ ಎರಡು ವಾರಗಳ ಹಿಂದೆ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಎಸ್‍ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಮಾಡಲಾಗಿತ್ತು. ಕಲ್ಲಡ್ಕದಲ್ಲಿ ಕಲ್ಲು ತೂರಾಟ, ಚೂರಿ ಇರಿತದ ಕಾರಣದಿಂದ ತಿಂಗಳ ಪರ್ಯಂತ ಸೆಕ್ಷನ್ ಇದ್ದರೂ ಈ ಕೊಲೆ ನಡೆದಿದ್ದು ಈ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಶ್ರಫ್ ಹತ್ಯೆಯ ಪ್ರತೀಕಾರಕ್ಕಾಗಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ.
ಆರೋಪಿಗಳು ಪಿಎಫ್‍ಐ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು ಮತೀಯ ದ್ವೇಷಕ್ಕೆ ಅಮಾಯಕ ಶರತ್‍ನ ರಕ್ತ ಹೀರಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ಚಾಮರಾಜನಗರ ಜಿಲ್ಲೆಯ ಪಿಎಫ್‍ಐ ಅಧ್ಯಕ್ಷ ಖಲೀಲುಲ್ಲಾ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಪರೋಕ್ಷ ಭಾಗಿಯಾದವರ ಮಾಹಿತಿಗಾಗಿ ಪೊಲೀಸರು ಕಠಿಣ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹರಿಶೇಖರನ್ ಹೇಳಿದ್ದಾರೆ.
ಆರೋಪಿಗಳ ಬಂಧನದಿಂದ 43 ದಿನಗಳಿಂದ ಮಗನ ಸಾವಿನ ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಶರತ್ ಹೆತ್ತವರಲ್ಲಿ ಸಮಾಧಾನ ಮೂಡಿದೆ. ಆದರೆ ಮತೀಯವಾದಿಗಳ ರಕ್ತ ದಾಹಕ್ಕೆ ಅಮಾಯಕರು ಬಲಿಯಾಗುತ್ತಿರುವುದು ದುರಂತ.
https://www.youtube.com/watch?v=o40hIeKFh8E