ಹಾಸನ: ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ವೈಯಕ್ತಿಕ ನಿಂದನೆಗಳನ್ನು ಮಾಡುವ ಮೂಲಕ ಇಂದಿನ ರಾಜಕೀಯ ವ್ಯವಸ್ಥೆ ತಳಮಟ್ಟಕ್ಕೆ ಹೋಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳ ವೈಯಕ್ತಿಕ ನಿಂದನೆ ವಿಚಾರವಾಗಿ ನಾನು ಹೆಚ್ಚು ಉತ್ತರಿಸುವುದಿಲ್ಲ. ಯಾರು ವೈಯಕ್ತಿಕವಾಗಿ ನಿಂದನೆಗೆ ಇಳಿದಿದ್ದಾರೆ ಅವರ ನಡವಳಿಕೆಗಳನ್ನು ಮಾರ್ಪಾಡು ಮಾಡಿಕೊಳ್ಳುವಂತೆ ವಿನಂತಿಸಿದರು. ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ 290 ಪಾಸಿಟಿವ್, 10 ಸಾವು
ವೈಯಕ್ತಿಕ ನಿಂದನೆ ಮಾಡುವ ಮೂಲಕ ರಾಜಕಾರಣ ಮಾಡುವುದು ಸರಿಯಲ್ಲ. ಅಂತವರ ಬಗ್ಗೆ ಮಾತನಾಡುವುದಿಲ್ಲ, ನಾನು ದೇಶದ ಪ್ರಧಾನಿಯಾಗಿದ್ದವನು. ನಾನು ರಾಜ್ಯದಲ್ಲಿ 45 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. 40 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸುವುದಕ್ಕೆ ಹೋರಾಟ ಮಾಡಿದ್ದು, ಇಂಥವುಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲ ಇತರೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈ ಬೆಳವಣಿಗೆ ಬಡವರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸಾಗಾಣಿಕೆ ವೆಚ್ಚ ಸೇರಿ ತರಕಾರಿ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಉಪ ಚುನಾವಣೆ ವೇಳೆ ಎಲ್ಲೂ ಹೋಗಿಲ್ಲ ಒಂದು ದಿನ ಮಾತ್ರ ಸಿಂದಗಿಗೆ ಹೋಗಿದ್ದೆ. ಪಕ್ಷದ ವಿರೋಧದ ನಡುವೆಯೂ ಸಹ ಮನಗೋಳಿಯನ್ನು ಬೆಳೆಸಿದೆ. ಮನಗೊಳಿ ಸೀಟು ನೀಡಬಾರದು ಎಂದು ಇಡೀ ಪಕ್ಷ ವಿರೋಧಿಸಿತ್ತು. ಅಂಥವರನ್ನು ಎರಡು ಬಾರಿ ಮಂತ್ರಿ ಮಾಡಿದ್ದೆ. ಆದರೆ ಇಂದು ಅವರ ಮಗ ಕಾಂಗ್ರೆಸ್ ಸೇರಿದ್ದಾರೆ ಎಂದು ಕಿಡಿಕಾರಿದರು. ಜೆಡಿಎಸ್ ನಿಂದ ಮನಗೊಳಿ ಅವರ ತಂದೆ ಮಂತ್ರಿಯಾಗಿದ್ದರು. ಅವರ ಮಗ ನಮ್ಮಪ್ಪನೇ ಕಾಂಗ್ರೆಸ್‍ಗೆ ಹೋಗಲಿಕ್ಕೆ ತಿಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅದನ್ನು ಕಾಂಗ್ರೆಸ್‍ನವರು ಕೂಡ ಹೇಳಿದ್ದಾರೆ. ಇದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗ್ಬೇಕಿತ್ತು: ಹೆಚ್‍ಡಿಕೆ
ನಮ್ಮ ಪಕ್ಷದಿಂದ ಅಲ್ಪಸಂಖ್ಯಾತ ಹೆಣ್ಣು ಮಗಳನ್ನು ಕಣಕ್ಕಿಳಿಸಿದ್ದೇವೆ. ಅವರಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ನನ್ನ ಕೊನೆ ಗಳಿಗೆವರೆಗೂ ನಾನು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಜನರಲ್ಲಿ ಮನವಿ ಮಾಡುವುದಾಗಿ ದೇವೇಗೌಡರು ಹೇಳಿದರು. ಇದನ್ನೂ ಓದಿ: ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಕೊರೊನಾ ಹೊಸ ತಳಿ ಬಂದಿದೆ: ಕೆ.ಸುಧಾಕರ್