ಮೈಸೂರು: ನಾನು ಡಿಎಆರ್ ವಿಭಾಗದಲ್ಲಿ ಪೊಲೀಸ್ ಪೇದೆ ಎಂದು ಯುವತಿಯನ್ನು ನಂಬಿಸಿ ಮದುವೆಯಾದ ವ್ಯಕ್ತಿಯೋರ್ವನನ್ನು ಈಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪರಸಯ್ಯನಹುಂಡಿ ಗ್ರಾಮದ ನಿವಾಸಿ ಶಿವಮೂರ್ತಿ (25) ಎಂಬಾತನೇ ಬಂಧಿತ ವ್ಯಕ್ತಿ. ಈತ ಮದುವೆಯಾಗಲು ಹೊಸ ಪ್ಲಾನ್ ಹುಡುಕಿದ್ದು, ತಾನು ಮೈಸೂರಿನ ಡಿಎಆರ್ ವಿಭಾಗದಲ್ಲಿ ಪೊಲೀಸ್ ಆಗಿದ್ದೇನೆ ಎಂದು ಸುಳ್ಳು ಹೇಳಿ ವಂಚಿಸಿದ್ದಾನೆ.
Advertisement
Advertisement
ಮೈಸೂರಿನ ಬೋಗಾದಿ ಗ್ರಾಮದ ನಿವಾಸಿಯಾದ ದೇವಕಿ ಎಂಬ ಯುವತಿಯನ್ನು ನೋಡಲು ಈತ ನಕಲಿ ಪೊಲೀಸ್ ಡ್ರೆಸ್‍ನಲ್ಲೇ ಬಂದಿದ್ದ. ನಂತರ ಸ್ವಲ್ಪ ದಿನ ಪೊಲೀಸ್ ಡ್ರೆಸ್‍ನಲ್ಲೇ ಸುತ್ತಾಡಿಸಿ ನಮ್ಮ ಕುಟುಂಬದವರಿಗೆ ನಂಬಿಕೆ ಬರುವಂತೆ ಮಾಡಿದ್ದ ಎಂದು ಸದ್ಯ ಪತ್ನಿ ಹೇಳಿದ್ದಾರೆ.
Advertisement
ವಿವಾಹದ ವೇಳೆಗೆ ಡಿ.ಎ.ಆರ್.ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳಿದ್ದು, ಮದುವೆಗೆ ವರದಕ್ಷಿಣೆಯಾಗಿ ಒಂದು ಲಕ್ಷ ನಗದು ಮತ್ತು 260 ಗ್ರಾಂ ಚಿನ್ನ ಪಡೆದು ದೇವಕಿಯನ್ನ ಮದುವೆ ಆಗಿದ್ದ. ಮದುವೆ ನಂತರ ಪ್ರತಿದಿನ ಕರ್ತವ್ಯಕ್ಕೆ ತೆರಳುವಂತೆ ನಕಲಿ ಪೊಲೀಸ್ ಮವಸ್ತ್ರ ಧರಿಸಿ ಮನೆಯಿಂದ ಆಚೆ ಹೋಗುತ್ತಿದ್ದ. ಪತಿಯ ಮೇಲೆ ಅನುಮಾನಗೊಂಡ ಹೆಂಡತಿ ಈತನ ವಿಷಯವನ್ನು ತಿಳಿಯಲು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ನಕಲಿ ಪೊಲೀಸ್ ಎಂದು ಗೊತ್ತಾಗಿದೆ.
Advertisement
ಈತನ ವಂಚನೆ ಬೆಳಕಿಗೆ ಬರುವಷ್ಟರಲ್ಲಿ ಸುಮಾರು 2 ಕೋಟಿಯಷ್ಟು ಪರಿಚಯದವರಿಂದ ಸಾಲಮಾಡಿ ತಲೆಮರೆಸಿಕೊಂಡಿದ್ದ. ಹೀಗಾಗಿ ಪತ್ನಿ ಪತಿಯ ವಂಚನೆಗೆ ಬೇಸತ್ತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಲೆಮರೆಸಿಕೊಂಡಿದ್ದ ಶಿವಮೂರ್ತಿಯನ್ನ ಸದ್ಯ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.