ಶಿವಮೊಗ್ಗ: ಇಲ್ಲಿನ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶೇಷಾದ್ರಿಪುರಂ ಬ್ರಾಂಚ್‍ನ ಅಧಿಕಾರಿಯೊಬ್ಬರನ್ನು ಕಿಡ್ನಾಪ್ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿ ಹಣಕ್ಕಾಗಿ ಒತ್ತಾಯಿಸಿದ ಘಟನೆ ನಡೆದಿದೆ.
ಮೂಲತಃ ಹೈದರಾಬಾದ್ ಮೂಲದ ಸುಂದರ ಪ್ರಸನ್ನ ವದನ ಕಿಡ್ನಾಪ್‍ಗೆ ಒಳಗಾಗಿದ್ದು, ಮಾರಣಾಂತಿಕವಾಗಿ ಹಲ್ಲೆಗೀಡಾಗಿ ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗದ ವಿನೋಬಾ ನಗರದಲ್ಲಿ ವಾಸವಾಗಿದ್ದ ಸುಂದರ್ ಗೆ ಒಂದು ವರ್ಷದ ಹಿಂದೆ ಬ್ಯಾಂಕಿನಲ್ಲಿ ಮೈಸೂರಿನ ಸಹನಾ ಬಾನು ಎಂಬವರ ಪರಿಚಯ ಆಗಿತ್ತು. ಸಹನಾ ಬಾನು ಸುಂದರ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದರು. ನಿನ್ನೆ ಬ್ಯಾಂಕಿಗೆ ಬಂದ ಯುವಕನೊಬ್ಬ ಸಹನಾ ಬಾನು ಕರೆಯುತ್ತಿದ್ದಾರೆ ಎಂದು ಹೊರಗೆ ಕರೆದುಕೊಂಡು ಹೋಗಿದ್ದನು. ತಕ್ಷಣ ನಾಲ್ವರು ಸುಂದರ್ ನನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿದ್ದರು.
ಸಂಜೆಯವರೆಗೂ ಶೇಷಾದ್ರಿ ಪುರಂನ ಒಂದು ಕೊಠಡಿಯಲ್ಲಿ ಕೂಡಿ ಹಾಕಿ ತೀವ್ರವಾಗಿ ಥಳಿಸಿ, ಸಂಜೆ ವೇಳೆ ತುಂಗಾ ನದಿ ತೀರಕ್ಕೆ ಕರೆದುಕೊಂಡು ಹೋಗಿದ್ದಾರೆ. ಐದು ಲಕ್ಷ ಹಣ ತರಿಸು, ಇಲ್ಲದಿದ್ದರೆ ನೀರಿನಲ್ಲಿ ಮುಳುಗಿಸಿ ಸಾಯಿಸುತ್ತೇವೆ ಎಂದು ಬೆದರಿಸಿದ್ದಾರೆ. ಕೊನೆಗೆ ಒಂದು ಲಕ್ಷ ರೂಪಾಯಿ ಕೊಡಲು ಸುಂದರ್ ಒಪ್ಪಿಕೊಂಡಿದ್ದರು. ಈ ಹಣ ಪಡೆಯಲು ಬ್ಯಾಂಕ್ ಶಾಖೆ ಬಳಿ ಬಂದಾಗ, ಅಲ್ಲಿದ್ದ ಪೊಲೀಸರ ನೋಡಿ ಅಪಹರಣಾಕಾರರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣ ಕೋಟೆ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.